ರಾಜಕೀಯ ನಿವೃತ್ತಿ ಮಾತಾಡಿ ಭಾವುಕರಾದ ಸಾ. ರಾ. ಮಹೇಶ್
ಮೈಸೂರು, ಮಾರ್ಚ್ 17; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಮೈಮುಲ್ ಚುನಾವಣೆಯಲ್ಲಿ ದೇವೇಗೌಡ ಬಣದ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಮೈಸೂರು ಭಾಗದಲ್ಲಿ ಶಾಸಕ ಜಿ. ಟಿ. ದೇವೇಗೌಡ ಪ್ರಾಬಲ್ಯ ಏನೆಂಬುದು ಸಾಬೀತಾಗಿದೆ.
ಚುನಾವಣೆ ಫಲಿತಾಂಶದ ಬಗ್ಗೆ ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಪತ್ರಿಕಾಗೋಷ್ಠಿ ನಡೆಸಿದರು. ಜಿ. ಟಿ. ದೇವೇಗೌಡರ ನಾಯಕತ್ವದ ಬಗ್ಗೆ ಮಾತನಾಡಿದ ಅವರು, "ನಿಮ್ಮನ್ನ ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ. ಬೇಕಿದ್ದರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಕ್ಷ ಕಟ್ಟಿ" ಎಂದು ಆಹ್ವಾನ ನೀಡಿದರು.
"ನಾನು ರಾಜಕೀಯ ನಿವೃತ್ತಿ ಆಗುತ್ತೇನೆ. ಬೇಕಿದ್ದರೆ ಬಂದು ಕುಮಾರಸ್ವಾಮಿ ಜೊತೆ ಸೇರಿ ಪಕ್ಷವನ್ನು ಕಟ್ಟಿ. ಯಾಕೇ ನನ್ನ ಮೇಲೆ ಇಷ್ಟು ದ್ವೇಷ?, ಯಾಕಾಗಿ ನನ್ನನ್ನು ವಿರೋಧ ಮಾಡುತ್ತೀರಿ?. ನೀವು ಬರುವುದಾದರೆ ನಾನು ಪಕ್ಷ ಬಿಡುವೆ, ಇನ್ನೆರಡು ವರ್ಷ ಆದ ಮೇಲೆ ನಾನೇ ಸಾರ್ವಜನಿಕ ಜೀವನದಿಂದ ದೂರ ಇರುತ್ತೇನೆ. ನೀವು ಬಂದು ಪಕ್ಷ ಕಟ್ಟಿ" ಎಂದು ಸಾ. ರಾ. ಮಹೇಶ್ ಭಾವುಕರಾದರು.

ಜಿ. ಟಿ. ದೇವೇಗೌಡರಿಗೆ ಪ್ರಶ್ನೆ
ಶಾಸಕ ಜಿ. ಟಿ. ದೇವೇಗೌಡರಿಗೆ ತಿರುಗೇಟು ನೀಡಿದ ಶಾಸಕ ಸಾ. ರಾ. ಮಹೇಶ್, "2006ರಲ್ಲಿ ಪಕ್ಷ ಬಿಟ್ಟಾಗ ಯಾರು ನೋವು ಕೊಟ್ಟಿದ್ದು?. ನೀವೂ ಪಾರ್ಟಿಯಲ್ಲಿ ಇದ್ದ ಮೇಲೆ ನೇತೃತ್ವ ವಹಿಸಿಕೊಂಡು ಮುನ್ನೆಡೆಸಿ. ಹುಣಸೂರಿನ ಉಪ ಚುನಾವಣೆಯಲ್ಲಿ ಯಾಕೆ ಹಾಗೆ ಮಾಡಿದಿರಿ?, ಯಾಕೆ ಪಾಲಿಕೆ ಚುನಾವಣೆಗೆ ಗೈರಾದಿರಿ?" ಎಂದು ಸಾ. ರಾ. ಮಹೇಶ್ ಪ್ರಶ್ನಿಸಿದರು.

ಬನ್ನಿ ಜವಾಬ್ದಾರಿ ತೆಗೆದುಕೊಳ್ಳಿ
"ನಿಮ್ಮನ್ನು ನಮ್ಮ ನಾಯಕರು ಅಂತ ಒಪ್ಪಿಕೊಂಡಿದ್ದೇವೆ. ಬನ್ನಿ ನಾಳೆಯಿಂದ ಜವಾಬ್ದಾರಿ ತೆಗೆದುಕೊಳ್ಳಿ. ಇದನ್ನ ಕೇಳಿದರೆ ನನ್ನನ್ನು ಶಕುನಿ ಅಂತ ಹೇಳುತ್ತೀರಿ. ಮಹಾಭಾರತದಲ್ಲಿ ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿತ್ತಾ?. ಧರ್ಮ ಸಂಸ್ಥಾಪನೆ ಆಗುತ್ತಿತ್ತಾ?. ನನ್ನನ್ನು ಮಂಥರೆ ಎಂದು ಪ್ರಸ್ತಾಪ ಮಾಡುತ್ತೀರಿ, ಮಂಥರೇ ಇಲ್ಲದಿದ್ದರೆ ರಾವಣ ಸಂಹಾರ ಆಗುತ್ತಿತ್ತಾ?. ರಾಮ ರಾಜ್ಯ ನಿರ್ಮಾಣ ಆಗುತ್ತಿತ್ತಾ? ಅವರಿಂದ ಇದೆಲ್ಲವೂ ಸಾಧ್ಯವಾಗಿದೆ" ಎಂದು ಸಾ. ರಾ. ಮಹೇಶ್ ಹೇಳಿದರು.

ನೀವು ಆಲದ ಮರವಾಗಲು ನೀರು ಹಾಕಿದ್ದಾರೆ
"ಜನತಾದಳವನ್ನು ಹಣಿಯಲು ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ನಾನು ಆಲದ ಮರ ನನ್ನನ್ನು ಕಡಿಯಲು ಆಗಲ್ಲ ಅಂತೀರಾ?. ನಾವು ನಿಮ್ಮನ್ನು ಕಡಿಯುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಆಲದ ಮರ ಬೇರು ಬಿಟ್ಟರೆ ಪಕ್ಕದಲ್ಲಿ ಯಾವುದೇ ಬೇರು ಬಿಡಲು ಬಿಡುವುದಿಲ್ಲ. ನಾನು ಅದನ್ನು ಅರಣ್ಯಾಧಿಕಾರಿ ಬಳಿ ಮಾಹಿತಿ ಪಡೆದುಕೊಂಡೆ. ನೀವೂ ಆಲದ ಮರವಾಗಲು ಕುಮಾರಣ್ಣ ನೀರು ಹಾಕಿದ್ದಾರೆ. ಅದಕ್ಕೆ ಸರಿಯಾದ ಸಸಿಯನ್ನು ಹುಡುಕಿ ನೆಡುವ ಕೆಲಸ ಕುಮಾರಣ್ಣ ಈಗ ಮಾಡುತ್ತಿದ್ದಾರೆ" ಎಂದು ಸಾ. ರಾ. ಮಹೇಶ್ ಹೇಳಿದರು.

ರಾಜಕಾರಣ ಬೇಡ ಎಂದವರು ಯಾರು?
"ಕೆಲವು ಮೈಮುಲ್ ಅಭ್ಯರ್ಥಿಗಳಿಗೆ ನಮ್ಮ ಟೀಂಗೆ ಬಂದರೆ ಮಾತ್ರ ಟಿಕೆಟ್ ಕೊಡುತ್ತೇನೆ ಎಂದವರು ಯಾರು.? ಪಿರಿಯಾಪಟ್ಟಣದ ಶಾಸಕರ ಮಗ ಹಾಗೂ ಮತ್ತೊಬ್ಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೀರಿ. ಆ ಶಾಸಕರು ನಮ್ಮ ಜೆಡಿಎಸ್ ಪಕ್ಷದಿಂದ ಗೆದ್ದವರಲ್ಲವೇ? ನಾಲ್ಕು ಕಡೆಗಳಲ್ಲಿ ಜೆಡಿಎಸ್ ಬೆಂಬಲಿತರಿಗೆ ನೀವು ಟಿಕೆಟ್ ಕೊಡಲಿಲ್ಲ. ಮೈಸೂರು ಹಾಗೂ ಹುಣಸೂರು ಸಬ್ ಡಿವಿಷನ್ ನಲ್ಲಿ ಬಿಜೆಪಿ, ಕಾಂಗ್ರೆಸ್, ನೀವೂ ಮೂರು ಜನ ಒಂದಾಗಿದ್ದೀರಿ. ಆದರೂ ಇಲ್ಲಿ ರಾಜಕಾರಣ ಬೇಡ ಅಂತ ಹೇಳುತ್ತೀರಿ. ಆದರೂ ಕುಮಾರಸ್ವಾಮಿ ಅವರನ್ನು ಇಲ್ಲಿಗೆ ತರಬಾರದಿತ್ತು ಎಂದು ಏಕೆ ಅಂತೀರಿ?" ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications