ಮೈಸೂರಿನ ಭೀಕರ ಅಪಘಾತದಲ್ಲಿ 6 ಮಂದಿ ಸಾವು, ಮೂವರಿಗೆ ಗಾಯ
ಮೈಸೂರು, ಏಪ್ರಿಲ್ 20; ಮೈಸೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಮದುವೆ ಮುಗಿಸಿ ವಾಪಸ್ ಆಗುತ್ತಿದ್ದಾಗ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ.
ಹುಣಸೂರು-ವಿರಾಜಪೇಟೆ ರಸ್ತೆಯ ಅರಸು ಕಲ್ಲಹಳ್ಳಿ ಬಳಿ ಬುಧವಾರ ಸಂಜೆ ಬೊಲೆರೋ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 6 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕೊಡಗಿನ ಪಾಲಿಬೆಟ್ಟದ ನಿವಾಸಿಗಳಾದ ಸಂತೋಷ್(47), ಎಂ.ಆರ್.ಅನಿಲ್(44), ದಯಾನಂದ್ (42), ಬಾಬು(47), ರಾಜೇಶ್(42), ಟ್ಯಾಕ್ಸಿ ಮಾಲೀಕ ವಿನೀತ (33) ಮೃತರು ಎಂದು ಗುರುತಿಸಲಾಗಿದೆ. ಜಾರ್ಜ್ ಪುತ್ರಿ ಕೀರ್ತನ (22), ಎಂಜಲಿ (14) ಹಾಗೂ ಫಿಲೀಪ್ (65) ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ವಿಷಯ ತಿಳಿದು ಪಾಲಿಬೆಟ್ಟದಿಂದ ಆಗಮಿಸಿದ ಸಂಬಂಧಿಕರು ಹಾಗೂ ಸ್ನೇಹಿತರು ಶವಗಾರದ ಬಳಿ ಜಮಾಯಿಸಿದ್ದರು.

ಏನಿದು ಅಪಘಾತ:
ಹುಣಸೂರು ನಗರದ ಅದುಲ್ಲಾಮ್ ಪಾರ್ಟಿ ಹಾಲ್‌ನಲ್ಲಿ ನಡೆದ ಮದುವೆಯಲ್ಲಿ ಪಾಲಿಬೆಟ್ಟದ ಅನೇಕರು ಭಾಗವಹಿಸಿದ್ದರು. ಈ ಮದುವೆ ಮುಗಿಸಿಕೊಂಡು ಸಂಜೆ 3.45ರ ವೇಳೆ ಪಾಲಿಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕ ಸಂತೋಷ್‌ನ ನಿಯಂತ್ರಣ ತಪ್ಪಿ ಅರಸು ಕಲ್ಲಹಳ್ಳಿ ಬಳಿ ರಸ್ತೆ ಬದಿಯ ದೊಡ್ಡ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮರದ ರೆಂಬೆಯು ವಾಹನ ಟಾಪ್‌ಗೆ ಬಡೆದಿದೆ. ಈ ವೇಳೆ ಹಿಂದೆ ಕುಳಿತಿದ್ದ ಇಬ್ಬರು ಯುವತಿಯರು, ವೃದ್ದರಿಗೂ ತೀವ್ರ ಪೆಟ್ಟು ಬಿದ್ದಿದೆ. ವಾಹನ ಹಿಂಬಾಲಿಸಿ ಬರುತ್ತಿದ್ದ ಮತ್ತೊಂದು ವಾಹನದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದಾವಿಸಿದ ಪೊಲೀಸರು ವಾಹನದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಅಂಬುಲೆನ್ಸ್ ಮೂಲಕ ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಿದ್ದಾರೆ.
ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು:
''ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಮೂವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ,'' ಎಂದು ಎಸ್ಪಿ ಚೇತನ್ ತಿಳಿಸಿದ್ದಾರೆ.
ಸ್ಥಳಕ್ಕೆ ತಕ್ಷಣವೇ ಧಾವಿಸಿದ ಡಿವೈಎಸ್ಪಿ ರವಿಪ್ರಕಾಶ್, ಇನ್ಸ್‌ಪೆಕ್ಟರ್ ಚಿಕ್ಕಸ್ವಾಮಿ, ರವಿ, ಸಬ್ ಇನ್ಸ್‌ಪೆಕ್ಟರ್ ಜಮೀರ್ ಅಹಮ್ಮದ್, ರಾಧ ಸೇರಿದಂತೆ ಪೊಲೀಸ್ ಪಡೆಯು ಜನರನ್ನು ನಿಯಂತ್ರಿಸಿದರು. ನಂತರ ಮರದೊಳಗೆ ಸಿಲುಕಿಕೊಂಡಿದ್ದ ವಾಹನವನ್ನು ಹೊರಗೆಳೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ತದನಂತರ ಅಂಬುಲೆನ್ಸ್‌ಗಳಲ್ಲಿ ಶವಗಳನ್ನು ಹುಣಸೂರಿನ ಶವಗಾರಕ್ಕೆ ಸಾಗಿಸಲಾಯಿತು.












Click it and Unblock the Notifications