ಫೆ.14ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ, ಅಂದೇ ಮುಂದಿನ ನಿರ್ಧಾರ ಪ್ರಕಟ: ಸಿಎಂ ಇಬ್ರಾಹಿಂ
ಮೈಸೂರು, ಫೆಬ್ರವರಿ 2: ಬರುವ ಫೆಬ್ರವರಿ 14ರಂದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಅಂದೇ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಮಾತನಾಡಿದ ಅವರು, ನಾನು ಹೊಸ ಪಕ್ಷ ಕಟ್ಟುವುದಿಲ್ಲ. ಜನಾಭಿಪ್ರಾಯ ಸಂಗ್ರಹಿಸಿ ಪಕ್ಷ ಆಯ್ಕೆ ಮಾಡಿಕೊಳ್ಳುವೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ನ ಅಧ್ಯಾಯ ಮುಗಿದು ಹೋಗಿದ್ದು, ಯಾರಿಗೆ ಏನು ಬೇಕೋ ಅದನ್ನು ತಗೊಂಡು ಹೋಗುತ್ತಿದ್ದಾರೆ. ಮಂಚ, ಬೆಡ್, ದಿಂಬು ತೆಗೆದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಮೂರನೇ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಅಸಹಾಯಕರಾಗುತ್ತಿದ್ದು, ನಾನಂತೂ ಹೋರಾಟ ಶುರು ಮಾಡಿದ್ದೇನೆ. ಫೆಬ್ರವರಿ 14 ಲವರ್ಸ್ ಡೇ, ಅಂದೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದೇ ದಿನ ಯಾವ ಪಕ್ಷದ ಮೇಲೆ ಲವ್ ಆಗಿದೆ ಅಂತಾ ಹೇಳುತ್ತೇನೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ನನ್ನದೇ ಸ್ಥಿತಿ ಬರುತ್ತದೆ. ನನ್ನ ಜೊತೆ ಸಿದ್ದರಾಮಯ್ಯ ಮಾತಾಡಿಲ್ಲ. ಅವರನ್ನು ಬಾದಾಮಿಗೆ ಹೊತ್ತುಕೊಂಡು ಹೋದವನು ನಾನು. ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ ಎಂದು ಸಿಎಂ ಇಬ್ರಾಹಿಂ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಭೇಟಿ ನೀಡಿದ್ದ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಸ್ವಾಗತಕ್ಕೆ ಮೈಸೂರಿನಲ್ಲಿ ಅದ್ಧೂರಿ ಸಿದ್ಧತೆ ನಡೆಸಲಾಗಿತ್ತು. ಅಬ್ದುಲ್ ಖಾದರ್ ಶಾಹಿದ್‌ನಿಂದ ಅದ್ಧೂರಿ ಸಿದ್ಧತೆ ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಆರೋಪದಲ್ಲಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಶಾಹಿದ್ ಇದೀಗ ಸಿಎಂ ಇಬ್ರಾಹಿಂ ಜೊತೆ ಕೈಜೋಡಿಸಿದ್ದಾರೆ. ಈ ಮಧ್ಯೆ ಸಿ.ಎಂ. ಇಬ್ರಾಹಿಂ ನಡೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಸಿಎಂ ಇಬ್ರಾಹಿಂ ವಿರುದ್ಧ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಂಎಲ್‌ಸಿ ಎಚ್. ವಿಶ್ವನಾಥ್ ವಾಗ್ದಾಳಿ ವಿಚಾರವಾಗಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಎಚ್. ವಿಶ್ವನಾಥ್ ಅವರು ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಅವರ ಪಕ್ಷದಲ್ಲಿ ಅವರಿಗೆ ಯಾವುದೇ ಮಾನ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಇಬ್ರಾಹಿಂ ಬಂದ ಮೇಲೆ ಅವರಿಗೆ ಭದ್ರಾವತಿಯಲ್ಲಿ ಎಂಎಲ್ಎ ಟಿಕೆಟ್ ಕೊಟ್ಟಿದ್ದೇವು. ನಂತರ ಎಂಎಲ್‌ಸಿ ಮಾಡಿದೆವು. ಆದರೆ ಈಗ ಅವರಿಗೆ ಯಾವುದೇ ಅಧಿಕಾರ ಇಲ್ಲ ಅಂತ ಪಕ್ಷ ಬಿಟ್ಟು ಹೋಗಿದ್ದಾರೆ. ಇದರಲ್ಲಿ ಪಕ್ಷದ ಯಾವ ತಪ್ಪು ಇಲ್ಲ. ಚುನಾವಣೆ ಹತ್ತಿರ ಬರಲಿ ಬಿಜೆಪಿಯಿಂದ ಎಷ್ಟು ಜನ ವಾಪಸ್ಸು ಬರುತ್ತಾರೆ ಅಂತ ಗೊತ್ತಾಗುತ್ತದೆ. ನಾವು ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿ ಮಾಡಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಪಕ್ಷದ ರೀತಿ ಸರ್ಕಾರ ಬೀಳಿಸುವ ಕೆಲಸ ಮಾಡಲ್ಲ. ಆ ರೀತಿ ಮಾಡಬೇಕು ಅಂದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಚುನಾವಣೆ ಹತ್ತಿರ ಬಂದಾಗ ಅವರೇ ನಮ್ಮ ಬಳಿ ಬರುತ್ತಾರೆ ಎಂದು ಮೈಸೂರನಲ್ಲಿ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications