H.D.ಕುಮಾರಸ್ವಾಮಿವರೇ ಮೊದ್ಲು ಆರೋಪದ ದಾಖಲೆ ಇದ್ರೆ ಬಿಡುಗಡೆ ಮಾಡಿ, ಸುಮ್ನೆ ಪುಂಗ್ಬೇಡಿ: ಕೃಷ್ಣಬೈರೇಗೌಡ
ಮೈಸೂರು, ಆಗಸ್ಟ್, 08: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಧಾರರಹಿತ ಆರೋಪ ಮಾಡುವುದನ್ನು ಬಿಟ್ಟು ತಮ್ಮ ಬಳಿ ನಿರ್ದಿಷ್ಟ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಆಟ. ವಿಪಕ್ಷಗಳ ಷಡ್ಯಂತ್ರವನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಅಧಿಕಾರಿಗಳಿಗೆ ತೊಂದರೆ ಆದರೆ ನೇರವಾಗಿ ಲೋಕಾಯುಕ್ತರಿಗೆ ದೂರು ನೀಡಬಹುದು ಎಂದರು.ಹಾಗೆಯೇ ಸುಳ್ಳು ದಾಖಲೆ ಸೃಷ್ಟಿಸಿ ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.

ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ಪತ್ರ ಬರೆದ ಆರೋಪವೂ ನಕಲಿಯಾಗಿದೆ. ನಕಲಿ ಪತ್ರ ಎಂದು ಗೊತ್ತಿದ್ದರೂ ಕೆಲವರು ಅದನ್ನೇ ಮುಂದಿಟ್ಟುಕೊಂಡು ಪ್ರಚಾರ ಗಿಟ್ಟಿಸಿದ್ದರು. ಚಲುವರಾಯಸ್ವಾಮಿ ವಿಚಾರದಲ್ಲಿ ಪತ್ರ ನಾವು ಬರೆದಿಲ್ಲ, ಅದು ನಕಲಿ ಎಂದು ಈಗಾಗಲೇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವೇ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿ ಜನರಿಗೆ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪ್ರತಿಪಕ್ಷದವರಿಗೆ ಸರ್ಕಾರದ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ. ಕೊಟ್ಟ ಮಾತನ್ನು ರಾಜ್ಯ ಸರ್ಕಾರ ಈಡೇರಿಸಿದೆ. 5 ವರ್ಷವಾದರೂ ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಸರ್ಕಾರ ಬಂದ ಎರಡೇ ತಿಂಗಳಿನಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ನಿತ್ಯ ಒಂದಲ್ಲ ಒಂದು ರೀತಿ ಷಡ್ಯಂತ್ರ ನಡೆಸುತ್ತಿವೆ. ನಕಲಿ ಆರೋಪ, ಯಾವುದೇ ದಾಖಲೆ ನೀಡದೆ ನಿತ್ಯ ಆರೋಪ ಮಾಡುತ್ತಿವೆ. ಆದರೆ, ದೇಶದಲ್ಲಿ ಜನ ಜಾಗೃತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು, ಬಡವರ ಸ್ಥಿತಿ ಕುಗ್ಗುತ್ತಿದೆ. ಜನರೇ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಇಂಡಿಯಾ ಮೈತ್ರಿ ಕೂಟ ದಿನೇ ದಿನೇ ಪ್ರಬಲವಾಗುತ್ತಿದೆ. ರಾಹುಲ್ ಗಾಂಧಿ ವಿರುದ್ಧ ತಪ್ಪು ಕೇಸ್‌ಗಳನ್ನು ಹಾಕಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದನ್ನು ಅರಿತ ಪ್ರತಿಪಕ್ಷಗಳು ರಾಜ್ಯ ಸರ್ಕಾರದ ಜನಪ್ರಿಯತೆ ಕುಗ್ಗಿಸಲು ಯತ್ನಿಸುತ್ತಿವೆ ಎಂದರು.












Click it and Unblock the Notifications