ಯುವಕರು ಯುವತಿಯರ ವೇಷ ಧರಿಸುವ ರಮ್ಮನಹಳ್ಳಿ ಜಾತ್ರೆ!
ಮೈಸೂರು, ಮಾರ್ಚ್ 20; ಈಗ ಜಾತ್ರೆಯ ಕಾಲ. ಹಳ್ಳಿಗಳಿಂದ ಪಟ್ಟಣಗಳ ತನಕ ವಿವಿಧ ಜಾತ್ರೆಗಳು ನಡೆಯುತ್ತಿದ್ದು, ಒಂದೊಂದು ಕಡೆ ನಡೆಯುವ ಜಾತ್ರೆಯೂ ಒಂದೊಂದು ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿದೆ. ಇಂತಹ ಜಾತ್ರೆಗಳ ಪೈಕಿ ಮೈಸೂರು ಸಮೀಪವಿರುವ ರಮ್ಮನಹಳ್ಳಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಗ್ರಾಮದೇವತೆ ಲಕ್ಷ್ಮಿದೇವಿ ಮಾರಮ್ಮನ ಜಾತ್ರೆ ವಿಭಿನ್ನ ಮತ್ತು ವಿಶಿಷ್ಟವಾಗಿದೆ.
ಈ ಜಾತ್ರೆಗೆ ಸುಮಾರು ಎರಡು ವಾರ ಇರುವಂತೆಯೇ ಗ್ರಾಮಸ್ಥರು ಸಿದ್ಧತೆ ಆರಂಭಿಸುತ್ತಾರೆ. ಏಕೆಂದರೆ ಈ ಜಾತ್ರೆ ಗ್ರಾಮಕ್ಕೆ ಸೀಮಿತವಾದುದಲ್ಲ. ಸುತ್ತಮುತ್ತಲಿನ ಜನರು, ಬಂಧುಗಳು ಹಬ್ಬಕ್ಕೆ ಬರುತ್ತಾರೆ. ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ಇಲ್ಲಿ ನಡೆಯುವ ಆಚರಣೆಯಿಂದ ಈ ಹಬ್ಬ ಎಲ್ಲರ ಗಮನಸೆಳೆದಿದೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯ ಪ್ರಮುಖ ವಿಶೇಷತೆಗಳೇನು ಎನ್ನುವುದನ್ನು ನೋಡಿದ್ದೇ ಆದರೆ ಈ ಹಬ್ಬದಲ್ಲಿ ಪುರುಷರು ಮಹಿಳೆಯರ ವೇಷ ಧರಿಸಿ ತಮಟೆಯ ಸದ್ದಿಗೆ ತಕ್ಕಂತೆ ಕುಣಿಯುವುದು ಇಲ್ಲಿನ ಸಂಪ್ರದಾಯವಾಗಿದೆ. ರಮ್ಮನಹಳ್ಳಿಯ ಗ್ರಾಮದೇವತೆ ಹಬ್ಬವು ಈ ಬಾರಿ ಮಾರ್ಚ್ 19ರ ಶನಿವಾರ ನಡೆಯಿತು. ಇಡೀ ಗ್ರಾಮ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ.

ಮಾರಮ್ಮನನ್ನು ಆರಾಧನೆ ಮಾಡಲಾಗುತ್ತದೆ
ತಳಿರು ತೋರಣ, ವಿದ್ಯುತ್ ದೀಪಗಳು ಮಾತ್ರವಲ್ಲದೆ, ಎಲ್ಲೆಂದರಲ್ಲಿ ಅಪ್ಪುವಿನ ಭಾವಚಿತ್ರಗಳ ಫೋಸ್ಟರ್‌ಗಳು ರಾರಾಜಿಸುತ್ತಿವೆ. ಗ್ರಾಮದ ಯುವಕರು ಯುವತಿಯರ ವೇಷ ಧರಿಸಿ ಕುಣಿಯುತ್ತಿದ್ದರೆ, ವಿಶೇಷ ಪೂಜೆಗಳ ಮೂಲಕ ಮಾರಮ್ಮನನ್ನು ಆರಾಧಿಸಲಾಗುತ್ತದೆ.
ಹಬ್ಬದ ಪ್ರಯುಕ್ತ ಸುಮಾರು 15 ದಿನಗಳ ಕಾಲ ಯುವಕರು ಯುವತಿಯರಂತೆ ಸೀರೆ, ಚೂಡಿದಾರ್, ಜೀನ್ಸ್, ಮಿಡಿ ಹೀಗೆ ವಿವಿಧ ಬಗೆಯ ವೇಷ, ಭೂಷಣಗಳನ್ನು ಧರಿಸಿ ಕುಣಿಯುತ್ತಾ ಹಬ್ಬಕ್ಕೆ ತಯಾರಿ ನಡೆಸುತ್ತಾರೆ.

ವಿಶೇಷ ಪೂಜೆಯೊಂದಿಗೆ ಜಾತ್ರೆ
ಮುಂಜಾನೆ 5.30 ರಿಂದ ಹಬ್ಬದ ಆಚರಣೆ ಆರಂಭವಾಗಿ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲ ನೆರೆದು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬದ ವಿಧಿವಿಧಾನಗಳು ಆರಂಭಗೊಳ್ಳುತ್ತವೆ. ಹರಕೆ ಹೊತ್ತವರು ಗ್ರಾಮದ ಸಮೀಪವಿರುವ ಕೊಳದಲ್ಲಿ ಬಾಯಿಬೀಗ ಹಾಕಿದರೆ, ಯುವಕರು ಯುವತಿಯರ ವೇಷ ಧರಿಸಿ ಕುಣಿದರೆ, ವಯಸ್ಕರು ದೊಣ್ಣೆ ಹಿಡಿದು ವರಸೆ ನಡೆಸುತ್ತಾರೆ.
ಇದೇ ವೇಳೆ ದೇವಿಗೆ ಹೂ, ಕುಂಕುಮಾರ್ಚನೆ ನಡೆಸುತ್ತಾರೆ. ನಂತರ ದೇವರ ಅಲಂಕೃತಗೊಂಡ ಕಳಸಗಳನ್ನು ಹೆಂಗಳೆಯರು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ಸಂದರ್ಭ ಮನೆಮನೆಗಳಲ್ಲಿ ಕಳಸಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ನಾಟಕ ಪ್ರದರ್ಶನ ನಡೆಯುತ್ತದೆ
ಜಾತ್ರೆಗೆ ಕಳೆಕಟ್ಟುವುದು ಮಧ್ಯಾಹ್ನ ಮೂರರ ನಂತರವೇ. ಈ ವೇಳೆ ದೊಣ್ಣೆಗಳನ್ನು ಹಿಡಿದ ಪೌರಾಣಿಕ ನಾಟಕಧಾರಿಗಳ ವೇಷ ಸೇರಿದಂತೆ ನಾನಾ ವೇಷಗಳ ತೊಟ್ಟ ಯುವ ಸಮುದಾಯ ತಮಟೆಯ ಸದ್ದಿಗೆ ದೊಣ್ಣೆಗಳನ್ನು ಬೀಸುತ್ತಾ ನರ್ತಿಸುತ್ತಾರೆ. ಈ ಸುಂದರ ದೃಶ್ಯಗಳನ್ನು ನೋಡಲೆಂದೇ ಸುತ್ತಮುತ್ತಲಿನ ಗ್ರಾಮದ ಜನರು ಅಪಾರ ಜನಸಂಖ್ಯೆಯಲ್ಲಿ ನೆರೆಯುತ್ತಾರೆ.
ಹತ್ತು ದಿನಗಳಿಂದಲೂ ಪುರುಷರು ನೃತ್ಯ ಮಾಡಿದರೆ ಜಾತ್ರೆಯ ಕೊನೆಯ ದಿನ ಮಹಿಳೆಯರು ಕೂಡ ಹೆಜ್ಜೆ ಹಾಕುವುದು ವಿಶೇಷವಾಗಿದೆ. ಇದೇ ವೇಳೆ ಗ್ರಾಮದಲ್ಲಿ ನಾಟಕ ಪ್ರದರ್ಶನವೂ ನಡೆಯುತ್ತದೆ.

ಮಾಂಸ ಮಾರಾಟ, ಸೇವನೆ ನಿಷೇಧ
ಇನ್ನೊಂದೆಡೆ ಗ್ರಾಮ ದೇವತೆ ಲಕ್ಷ್ಮೀ ದೇವಿಯ ಉತ್ಸವ ಮೂರ್ತಿಯನ್ನು ಶ್ರೀರಂಗಪಟ್ಟಣದ ಚಂದಗಾಲು ಗ್ರಾಮದ ಹೊಳೆಯಲ್ಲಿ ಶುಚಿಗೊಳಿಸಿ ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಸಂಜೆ ಮೆರವಣಿಗೆ ನಡೆಸಲಾಗುತ್ತದೆ. ಹಬ್ಬದ ಹಿನ್ನಲೆಯಲ್ಲಿ 15 ದಿನಗಳ ಕಾಲ ಗ್ರಾಮದ ಸುತ್ತಮುತ್ತ ಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗುತ್ತದೆ.

ಜಾತ್ರೆಯಲ್ಲಿ ಅಪ್ಪು ನೆನಪು
ಒಂದಷ್ಟು ಹಬ್ಬದ ನಿರ್ಬಂಧಗಳಿದ್ದು ಅದರಂತೆ ಮನೆಯಲ್ಲಿ ಮೆಣಸಿನಕಾಯಿ ಸುಡುವುದಾಗಲೀ, ಒಗ್ಗರಣೆ ಹಾಕುವುದಾಗಲೀ, ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಹಾಕಿ ಓಡಾಡುವುದಾಗಲೀ ಮಾಡುವಂತಿಲ್ಲ. ಇದನ್ನು ಹಿಂದಿನಿಂದಲೂ ಗ್ರಾಮಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಗ್ರಾಮಸ್ಥರು ಹೇಳುವಂತೆ ಈ ಹಬ್ಬದ ಆಚರಣೆ ಇಂದು ನಿನ್ನೆಯದಾಗಿರದೆ, ಶತಮಾನಗಳ ಇತಿಹಾಸವಿದೆ ಎನ್ನಲಾಗಿದೆ.
ಒಟ್ಟಾರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ರಮ್ಮನಹಳ್ಳಿ ಜಾತ್ರೆ ಈ ಬಾರಿ ಕೊರೊನಾ ನಂತರ ನಡೆಯುತ್ತಿದ್ದು, ಜನ ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ಜಾತ್ರೆ ತುಂಬಾ ಅಪ್ಪುವಿನ ನೆನಪು ಮೇಳೈಸುತ್ತಿದೆ. ಅಭಿಮಾನಿಯೊಬ್ಬ ತನ್ನ ಮೈ ತುಂಬಾ ಅಪ್ಪುವಿನ ಹೆಸರನ್ನು ಬರೆದು ಎಲ್ಲರ ಗಮನಸೆಳೆಯುತ್ತಿದ್ದದ್ದು ಕಂಡು ಬಂದಿದೆ.












Click it and Unblock the Notifications