Ram Mandir; ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಪ್ರತಿಷ್ಠಾಪನೆ
ಮೈಸೂರು, ಜನವರಿ 15: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀ ರಾಮನ ಪ್ರತಿಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.
ಸಂಕ್ರಾಂತಿ ದಿನವಾದ ಸೋಮವಾರ ಈ ಕುರಿತು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.

ಅಯೋಧ್ಯೆಯ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್. ಡಿ. ಕೋಟೆಯದ್ದು ಎಂಬುದು ಕರ್ನಾಟಕಕ್ಕೆ ಮತ್ತೊಂದು ಗರಿಯಾಗಿದೆ. ಶ್ರೀ ರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ವಿವಿಧ ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಮೂವರು ಶಿಲ್ಪಿಗಳು ಕೆತ್ತನೆ ಮಾಡಿರುವ ವಿಗ್ರಹಗಳನ್ನು ಕಳೆದ ವಾರ ಆಯ್ಕೆ ಮಾಡಲಾಗಿತ್ತು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆ ಸಹ ಆಯ್ಕೆಯಾಗಿತ್ತು. ಆದರೆ ಈ ಕುರಿತು ಅಧಿಕೃತ ಘೋಷಣೆಯಾಗಿರಲಿಲ್ಲ.
ಪ್ರಾಣ ಮೂರ್ತಿ ಪ್ರತಿಷ್ಠಾಪನೆ ಪೂರ್ವಭಾವಿ ವಿಧಿಗಳು ಜನವರಿ 16ರಂದು ಆರಂಭವಾಗಲಿದೆ. ಜನವರಿ 21ರ ತನಕ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಪ್ರತಿಷ್ಠಾಪನೆಯ ಅಗತ್ಯವಿರುವ ಕೆಲವು ವಿಧಿಗಳು ಮಾತ್ರ ಜನವರಿ 22ರಂದು ನಡೆಯಲಿದೆ.
ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ವಿಗ್ರಹ 150 ರಿಂದ 200 ಕೆಜಿ ತೂಕವಿದೆ. ರಾಮನನ್ನು ಐದು ವರ್ಷದ ಬಾಲಕನ ಪ್ರತಿರೂಪದಂತೆ ಕೆತ್ತನೆ ಮಾಡಲಾಗಿದೆ. ಕಳೆದ 70 ವರ್ಷಗಳಿಂದ ಪೂಜಿಸಲಾಗುತ್ತಿರುವ ರಾಮ ಲಲ್ಲಾನ ವಿಗ್ರಹವನ್ನು ಸಹ ನೂತನ ದೇವಾಲಯದ ಗರ್ಭಗುಡಿಯಲ್ಲಿ ಇಟ್ಟು ಪೂಜಿಸಲಾಗುತ್ತದೆ.
ಪ್ರತಾಪ್ ಸಿಂಹ ಟ್ವೀಟ್; ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. 'ಕರ್ನಾಟಕದ ಹೆಮ್ಮೆಯ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀ ರಾಮನ ಪ್ರತಿಮೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ' ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
'ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜನವರಿ 22ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದಲ್ಲಿರುವ ಶ್ರೀ ಋಷ್ಯಶೃಂಗ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ನಡೆಸಲಾಗಿದೆ' ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಪೋಸ್ಟ್‌ನಲ್ಲಿ, 'ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ನಮ್ಮೆಲ್ಲರ ಆರಾದ್ಯ ದೈವ ಶ್ರೀರಾಮ ಲಲ್ಲಾ ಮೂರ್ತಿಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕರ್ನಾಟಕಕ್ಕೂ ಶ್ರೀರಾಮನಿಗೂ ಇರುವ ನಂಟಿಗೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ಸುಂದರ ಶ್ರೀರಾಮನ ಮೂರ್ತಿ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಭಿನಂದನೆಗಳು' ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, 'ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ 'ರಾಮಲಲ್ಲಾ' ಮೂರ್ತಿ ಆಯ್ಕೆ ಆಗಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಣೆ ಹೊರಡಿಸಿರುವುದು ಕನ್ನಡಿಗರೆಲ್ಲರ ಪಾಲಿನ ಸಂಕ್ರಾಂತಿ ಸಂಭ್ರಮವನ್ನು ಇಮ್ಮಿಡಿಗೊಳಿಸಿದೆ ಹಾಗೂ ರಾಮಲಲ್ಲಾ ಮೂರ್ತಿ ಅರಳಿರುವುದು ಹೆಚ್. ಡಿ. ಕೋಟೆ ತಾಲೂಕಿನ ಶಿಲೆಯಲ್ಲಿ ಎನ್ನುವ ಸಂಗತಿ ಮಂದಿರದ ಜತೆ ಕನ್ನಡಿಗರ ಶ್ರದ್ಧೆಯನ್ನು ಗಾಢಗೊಳಿಸಿದೆ' ಎಂದು ತಿಳಿಸಿದ್ದಾರೆ.
'ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಅವರಿಗೆ ಆ ಶ್ರೀರಾಮ ದೇವರ ಅನುಗ್ರಹ ಸದಾ ಇರಲಿ ಹಾಗೂ ಅವರು ಇಂಥ ಇನ್ನೂ ಅನೇಕ ಮಹೋನ್ನತ ಶಿಲ್ಪಗಳನ್ನು ದೇಶಕ್ಕೆ ನೀಡಲಿ, ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ' ಎಂದು ಪೋಸ್ಟ್ ಹಾಕಿದ್ದಾರೆ.












Click it and Unblock the Notifications