ಮನಪಾ ಸಭೆಯಲ್ಲಿ ರಿಂಗಣಿಸಿದ ಮೊಬೈಲು, ಕಾರು!
ಪಾಲಿಕೆ ಸದಸ್ಯರಿಗೆ ನೀಡಲಾಗಿದ್ದ ಉಚಿತ ಮೊಬೈಲ್ ಸಂಪರ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕಾರು ವಾಪಸ್ ಪಡೆದ ಪ್ರಕರಣ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.
ಮೈಸೂರು, ಮೇ 31 : ಪಾಲಿಕೆ ಸದಸ್ಯರಿಗೆ ನೀಡಲಾಗಿದ್ದ ಉಚಿತ ಮೊಬೈಲ್ ಸಂಪರ್ಕ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರುಗಳ ಕಾರು ವಾಪಸ್ ಪಡೆದ ಪ್ರಕರಣ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.
ಯಾವುದೇ ಮಾಹಿತಿ ನೀಡದೆ ಮೊಬೈಲ್ ಫೋನ್ ಸೌಲಭ್ಯ ವಾಪಸ್ ಪಡೆದದ್ದಕ್ಕೆ ಸದಸ್ಯರು ಸುಮಾರು ಒಂದೂವರೆ ಗಂಟೆ ಮೇಯರ್ ಎಂ.ಜೆ. ರವಿಕುಮಾರ್ ವಿರುದ್ಧ ಹರಿಹಾಯ್ದರು. ಮೊಬೈಲ್ ಸಂಪರ್ಕ ಮತ್ತೆ ನೀಡುವಂತೆ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.[ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ: ಸಿದ್ಧರಾಮಯ್ಯ]

ದುಬಾರಿ ಬಿಲ್ ಬಂದ ಕಾರಣ ಪಾಲಿಕೆ ಸದಸ್ಯರ ಮೊಬೈಲ್ ಫೋನ್ ಸಂಪರ್ಕವನ್ನು ಇತ್ತೀಚೆಗೆ ರದ್ದುಪಡಿಸಲಾಗಿತ್ತು. ಯಾವುದೇ ಅಭಿಪ್ರಾಯ ಪಡೆಯದೆ ಸಂಪರ್ಕ ರದ್ದುಪಡಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರ ಕೋಪ ಸಭೆಯಲ್ಲಿ ಒಕ್ಕೊರಲಿನಿಂದ ಪ್ರತಿಧ್ವನಿಸಿತು.
ಮೇಯರ್ ರವಿಕುಮಾರ್, ಆಯುಕ್ತ ಜಗದೀಶ್ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಸದಸ್ಯರು 'ಕೈ' ಎತ್ತುವ ಹಂತಕ್ಕೂ ತಲುಪಿದ್ದು ಮೈಸೂರು ಮಹಾನಗರ ಪಾಲಿಕೆ ತಲೆತಗ್ಗಿಸುವಂತೆ ಮಾಡಿತು.
ಮೊಬೈಲ್ ಸಂಪರ್ಕ ಬೇಕಿದ್ದರೆ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು. ಸಭೆಯಲ್ಲಿ ವಾಗ್ವಾದ ನಡೆಸಿದರೆ ಫಲವಿಲ್ಲ. ಪಾಲಿಕೆ ಸದಸ್ಯರಿಗೆ ಕೆಲವೊಂದು ಸವಲತ್ತುಗಳನ್ನು ಪಡೆದು ಕೊಳ್ಳುವ ಅವಕಾಶವಿದೆ. ಮೈಸೂರು ಪಾಲಿಕೆ ಮಾತ್ರವಲ್ಲ, ರಾಜ್ಯದ ಎಲ್ಲ ಪಾಲಿಕೆಗಳ ಮೇಯರುಗಳು, ಉಪಮೇಯರುಗಳು ಮತ್ತು ಸದಸ್ಯರು ಒಟ್ಟು ಸಭೆ ನಡೆಸಬೇಕು. ಏನೆಲ್ಲ ಸವಲತ್ತು ಬೇಕು ಎಂಬುದರ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿ ಎಂದು ಮೇಯರ್ ಮತ್ತು ಆಯುಕ್ತರು ಸಲಹೆ ನೀಡಿದರು.

ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ
ವಾಣಿಜ್ಯ ಕಟ್ಟಡಗಳು ಮತ್ತು ಮಾಲ್ ಗಳು ಇನ್ನು ಮುಂದೆ ಗ್ರಾಹಕರಿಂದ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುವಂತಿಲ್ಲ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. 'ಮಾಲ್ ಆಫ್ ಮೈಸೂರು' ತನ್ನಲ್ಲಿಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ಶುಲ್ಕ ವಿಧಿಸುತ್ತಿರುವ ವಿಷಯದ ಬಗ್ಗೆ ಚರ್ಚೆ ನಡೆಯಿತು.

ಶೇ 30ರಷ್ಟು ತೆರಿಗೆ ಹೆಚ್ಚಳ
ಪಾಲಿಕೆಗೆ ಪ್ರತಿ ವರ್ಷ ಘನತ್ಯಾಜ್ಯ ನಿರ್ವಹಣೆಗೆ ಒಟ್ಟು ₹ 60.26 ಕೋಟಿ ವೆಚ್ಚವಾಗುತ್ತಿದೆ. ಆದರೆ, ಪ್ರಸ್ತುತ ತೆರಿಗೆಯಿಂದ ವಾರ್ಷಿಕ ಕೇವಲ ₹ 12 ಕೋಟಿ ಸಂಗ್ರಹವಾಗುತ್ತಿತ್ತು. ಈ ವ್ಯತ್ಯಾಸವನ್ನು ಸರಿದೂಗಿಸಲು ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಹಾಲಿ ವಸೂಲಿ ಮಾಡುತ್ತಿರುವ ಸೆಸ್ ಅನ್ನು ಶೇ 30ರಷ್ಟು ಹೆಚ್ಚಿಸಲು ಕೌನ್ಸಿಲ್ ಸಭೆ ಅನುಮೋದನೆ ನೀಡಿತು.












Click it and Unblock the Notifications