ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ: ಸಿದ್ಧರಾಮಯ್ಯ
ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ. ಮನಬಂದಂತೆ ಹೇಳಿಕೆ ನೀಡುವುದನ್ನು ಅವರು ಕರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು, ಮೇ.31: ಯಡಿಯೂರಪ್ಪ ಎರಡು ನಾಲಿಗೆ ಮನುಷ್ಯ. ಮನಬಂದಂತೆ ಹೇಳಿಕೆ ನೀಡುವುದನ್ನು ಅವರು ಕರಗತ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆಯಲ್ಲಿ ಜನರ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಅವರು ಮಾತನಾಡುತ್ತಿದ್ದರು.[ಗೋಹತ್ಯೆ ನಿಷೇಧ ಕಾಯ್ದೆ =ಮತಾಂತರ:ಮಹಾದೇವಪ್ಪ ಹೊಸ ಲೆಕ್ಕ!]
ರಾಜ್ಯದ ರೈತರ 52 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕಿದೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 42 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕಿದೆ. ಸಹಕಾರಿ ಬ್ಯಾಂಕುಗಳಲ್ಲಿ 10 ಸಾವಿರ ಕೋಟಿ ಸಾಲ ಮನ್ನಾ ಮಾಡಬೇಕಿದೆ. ಮೊದಲು ಕೇಂದ್ರ ಸರ್ಕಾರ ತನ್ನ ಪಾಲಿನ ಸಾಲ ಮನ್ನಾ ಮಾಡಲಿ. ಆ ಬಳಿಕ ರಾಜ್ಯ ಸರ್ಕಾರ ಉಳಿದ ಸಾಲ ಮನ್ನಾ ಮಾಡಲಿದೆ ಎಂದರು.
ರೈತರ ಸಾಲಮನ್ನಾ ವಿಚಾರದಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಂಸದರು ಸಂಸತ್ ನಲ್ಲಿ ದನಿ ಎತ್ತುವುದಿಲ್ಲ. ರೈತರ ಸಾಲಮನ್ನಾ ವಿಚಾರದಲ್ಲಿ ಯಡಿಯೂರಪ್ಪ ದ್ವಂದ್ವ ನಿಲುವು ಪ್ರದರ್ಶಿಸುತ್ತಿದ್ದಾರೆ. ಯಡಿಯೂರಪ್ಪಗೆ ಎರಡು ನಾಲಿಗೆ ಇದೆ ಎಂದು ಹರಿಹಾಯ್ದರು.

ಜಿ.ಎಸ್.ಟಿ.ಯುಪಿಎ ಸರ್ಕಾರದ್ದು
ಜಿಎಸ್ ಟಿ ಮಸೂದೆ ಹಿಂದಿನ ಯುಪಿಎ ಸರಕಾರದ ಪ್ರತಿಫಲವಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಜಿಎಸ್ ಟಿ ಮಸೂದೆಯನ್ನು ಗುಜರಾತ್ ಸಿಎಂ ಮೋದಿ ವಿರೋಧಿಸಿದ್ದರು.

ಮೋದಿ ಯೂ ಟರ್ನ್
ಇದೀಗ ಯುಪಿಎ ಸರಕಾರದ ಅವಧಿಯ ಮಸೂದೆಯನ್ನೇ ಬದಲಾವಣೆಯೊಂದಿಗೆ ಅನುಷ್ಠಾನಕ್ಕೆ ತರವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಯೂ ಟರ್ನ್ ತೆಗೆದುಕೊಂಡಿದ್ದಾರೆ ಎಂದರು.

ಹೋಹತ್ಯೆ ನಿಷೇಧ ಸರಿಯಲ್ಲ
ಗೋ ಹತ್ಯೆ ಹಾಗೂ ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಸಿಎಂ, ಈ ಮೂಲಕ ಕೇಂದ್ರ ಸರಕಾರ ಜನರ ಆಹಾರ ಪದ್ಧತಿಯ ವಿರುದ್ಧ ಆಕ್ರಮಣ ನಡೆಸಿದೆ. ಸಂಬಂಧಪಟ್ಟ ಕಾಯ್ದೆ ಜಾರಿ ಕುರಿತಂತೆ ಆದೇಶ ರಾಜ್ಯ ಸರಕಾರಕ್ಕೆ ಲಭ್ಯವಾದ ನಂತರ ಕಾನೂನು ಹೋರಾಟ ಆರಂಭಿಸುವ ಚಿಂತನೆಯಿದೆ ಎಂದರು.

ಪಾರ್ವತಮ್ಮ ಅಂತಿಮ ದರ್ಶನ
ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರ ಅಂತಿಮ ದರ್ಶನ ಪಡೆದುಕೊಂಡು ಬಂದಿದ್ದೇನೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ಸೂಚಿಸಿದ್ದೇನೆ ಎಂದು ಸಹ ಅವರು ಇದೇ ಸಮಯದಲ್ಲಿ ಹೇಳಿದರು.

ಉಪಸ್ಥಿತರಿದ್ದ ಗಣ್ಯರು
ವೇದಿಕೆಯಲ್ಲಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಆಂಜನೇಯ, ರೋಶನ್ ಬೇಗ್, ರಮೇಶ್ ಕುಮಾರ್ ಮುಂತಾದ ಶಾಸಕರು ಉಪಸ್ಥಿತರಿದ್ದರು.











Click it and Unblock the Notifications