ಮುಡುಕುತೊರೆ ಬ್ರಹ್ಮ ರಥೋತ್ಸವಕ್ಕೆ ನಡೆದಿದೆ ಸಕಲ ಸಿದ್ಧತೆ
ಮೈಸೂರು, ಫೆಬ್ರುವರಿ 3: ತಿ.ನರಸೀಪುರ ತಾಲ್ಲೂಕು ಮುಡುಕುತೊರೆಯಲ್ಲಿರುವ ಶ್ರೀ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಫೆ.4 ರಂದು ಮಂಗಳವಾರ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.
ಕೆಲವು ಕ್ಯಾಲೆಂಡರ್‌ಗಳಲ್ಲಿ ದಿನಾಂಕ ತಪ್ಪಾಗಿ ಪ್ರಕಟವಾಗಿದ್ದರಿಂದ ಫೆ.4ರಂದೇ ಬ್ರಹ್ಮರಥೋತ್ಸವ ನಡೆಯುವ ಬಗ್ಗೆ ಸಾಕಷ್ಟು ಪ್ರಚಾರ ಮಾಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ ಮೂರ್ತಿ ಅವರು ತಿಳಿಸಿದ್ದಾರೆ. ಬ್ರಹ್ಮರಥೋತ್ಸವದ ಅಂಗವಾಗಿ ಅಂದು ಬೆಳಗ್ಗಿನಿಂದ ಹಲವಾರು ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ ನಡೆಯಲಿದ್ದು, ನಂತರ ಯಾಗಶಾಲೆಯಲ್ಲಿ ಶಿವಯಾಗ ಹೋಮ ನೆರವೇರಲಿದೆ. ಶಿವಯಾಗದ ನಂತರ ರಥ ಸಂಪೋಕ್ಷಣೆ ಮಾಡಿ, ಶಿವ-ಪಾರ್ವತಿ ಮೂರ್ತಿಯಿಟ್ಟು ಮಂಟಪೋತ್ಸವ ಮಾಡಲಾಗುತ್ತದೆ. ಮಂಟಪೋತ್ಸವ ಮುಗಿದ ಬಳಿಕ ಬೆಟ್ಟದಿಂದ ತಾಳುಬೆಟ್ಟಕ್ಕೆ ಉತ್ಸವ ಮೂರ್ತಿಯನ್ನು ತರಲಾಗುತ್ತದೆ. ಮಾರ್ಗ ಮಧ್ಯದಲ್ಲಿ ಏಳು ಮಂಟಪಗಳಲ್ಲಿ ಪೂಜೆ ಕೈಂಕರ್ಯ ನಡೆಯಲಿದೆ.

ಮಧ್ಯಾಹ್ನ 1 ಗಂಟೆ ವೇಳೆಗೆ ರಥಾರೋಹಣ ನೆರವೇರಿ ವಾಸ್ತು ಬೀದಿ ಎಂದು ಕರೆಯಲ್ಪಡುವ ನಾಲ್ಕು ರಸ್ತೆಯಲ್ಲಿ ರಥಯಾತ್ರೆ ನಡೆಯಲಿದೆ. ರಥಾರೋಹಣದ ನಂತರ ತೇರು ಮೊದಲಿಗೆ ದಕ್ಷಿಣಾಭಿಮುಖವಾಗಿ ಬಂದು ನಂತರ ಮೇಲ್ಮುಖವಾಗಿ ಸಂಚರಿಸಲಿದೆ. ಫೆ.7 ರಂದು ತೆಪ್ಪೋತ್ಸವ, ಫೆ.12 ರಂದು ಪರ್ವತ ಪರಿಷೆ ಹಾಗೂ ಕೊನೆಯ ದಿನವಾದ ಫೆ.13ರಂದು ಮಹಾಭಿಷೇಕ ನಡೆಯಲಿದೆ.












Click it and Unblock the Notifications