ಗರ್ಭಿಣಿ ತ್ರಿಷಿಕಾ ದಸರೆಯಲ್ಲಿ ಭಾಗವಹಿಸೋದು ಖಚಿತ: ಯದುವೀರ್
ಮೈಸೂರು, ಸೆಪ್ಟೆಂಬರ್ 15: ತ್ರಿಷಿಕಾ ಕುಮಾರಿ ದಸರೆಯಲ್ಲಿ ಭಾಗವಹಿಸುತ್ತಾರೆ. ಇಬ್ಬರೂ ದಂಪತಿ ಸಮೇತ ಪೂಜೆ ಸಲ್ಲಿಸುತ್ತೇವೆ ಎಂದು ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ತ್ರಿಷಿಕಾ ಗರ್ಭವತಿಯಾಗಿರುವುದರಿಂದ ದಸರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ರಾಜವಂಶಸ್ಥ ಯದುವೀರ್ ಒಡೆಯರ್, ಈ ಬಾರಿಯ ದಸರೆಯಲ್ಲಿ ಪಾಲ್ಗೊಳ್ಳುತ್ತೇವೆ. ಕಂಕಣ ಕಟ್ಟಿ ಪೂಜೆ ಸಲ್ಲಿಸಲಿಸಲಾಗುತ್ತದೆ. ಅವರಿಲ್ಲವಾದಲ್ಲಿ ನನಗೆ ಕಂಕಣ ಕಟ್ಟುವವರ್ಯಾರು? ಎಂದು ಪ್ರಶ್ನಿಸಿದರು.

ಮೈಸೂರಿನ ಕುವೆಂಪು ನಗರದ ಸರ್ಕಾರಿ ಶಾಲೆಯಲ್ಲಿ ಕಲಿಸು ಫೌಂಡೇಶನ್ ವತಿಯಿಂದ ಮಕ್ಕಳ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಯದುವೀರ್, ಅರಮನೆ ಸಂಪ್ರದಾಯದಂತೆ ಕಾರ್ಯಕ್ರಮ ನಡೆಯುತ್ತದೆ. ಕಂಕಣ ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ಧಾರ್ಮಿಕ ವಿಧಿ ವಿಧಾನ ಪೂರೈಕೆ ಆಗಬೇಕಾದರೆ ಕಂಕಣ ಕಟ್ಟಬೇಕು ಎಂದು ಹೇಳಿದರು.

ಈ ಭಾರಿ ಉತ್ತಮ ಮಳೆ ಬಿದ್ದಿರುವುದರಿಂದ ರಾಜ್ಯದ ಜನತೆ ಸುಖ, ಸಮೃದ್ಧಿಯಿಂದ ಬಾಳಲಿ. ರಾಜ್ಯದಲ್ಲಿ ಶಾಂತಿ ನೆಲೆಸಲಿ ಅಂತ ಚಾಮುಂಡೇಶ್ವರಿಯಲ್ಲಿ ಕೋರಿಕೆ ಸಲ್ಲಿಸುತ್ತೇನೆ. ಕನ್ನಡ ಶಾಲೆ ಉಳಿಸಲು ಪ್ರಯತ್ನಿಸಿ. ಕನ್ನಡ ಭಾಷೆ, ಶಾಲೆ ಉಳಿವಿಗೆ ಸದಾ ಸಿದ್ಧ ಎಂದು ಯದುವೀರ್ ತಿಳಿಸಿದರು.












Click it and Unblock the Notifications