ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ, ಹೀಗಾಗಿ ಮಹಿಳೆಯರಿಗೆ ಪ್ರವೇಶವಿಲ್ಲ:ಪ್ರತಾಪ್ ಸಿಂಹ
ಮೈಸೂರು, ಅಕ್ಟೋಬರ್. 18: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕೂಡಲೇ ಮರುಪರಿಶೀಲಿಸಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನ್ಯಾಯಾಲಯಗಳು ಧರ್ಮಗ್ರಂಥ ಆಧಾರಿತ ಮತಗಳ ಕನ್ನಡಕ ಹಾಕಿಕೊಂಡು, ನಂಬಿಕೆ, ವಿಶ್ವಾಸ, ವಿಧಿ-ವಿಧಾನ, ಆಚಾರ-ವಿಚಾರಗಳ ಆಧಾರಿತವಾಗಿರುವಂತಹ ಹಿಂದೂ ಧರ್ಮವನ್ನು ನೋಡಿ ತೀರ್ಪು ಕೊಡಲು ಪ್ರಾರಂಭವಾಗಿರುವುದರಿಂದ ಈ ಸಮಸ್ಯೆ ಆರಂಭವಾಗಿದೆ.
ಒಂದೇ ಧರ್ಮದ ಗ್ರಂಥದಲ್ಲಿ ಅವರು ನಂಬಿಕೆ ಇಟ್ಟುಕೊಂಡಿದ್ದಾರೆ. ಭಾರತದಲ್ಲಿ ಅಥವಾ ಮೆಕ್ಕಾದಲ್ಲಿದ್ದರೂ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಹಿಂದೂ ಧರ್ಮ ಹಾಗಲ್ಲ. ಈ ಧರ್ಮಕ್ಕೆ ಯಾರು ಪ್ರವಾದಿ ಇಲ್ಲ. ವಿಶ್ವಾಸ, ಆಚಾರ,-ವಿಚಾರ ಪರಂಪರಗತವಾಗಿ ನಡೆದುಕೊಂಡ ಬಂದಂತಹ ಒಂದು ಪದ್ಧತಿಗಳಲ್ಲಿ ಹಿಂದೂ ಧರ್ಮವಿದೆ.

ಇದನ್ನು ಅರ್ಥ ಮಾಡಿಕೊಳ್ಳದೆ ಸುಪ್ರೀಂಕೋರ್ಟ್ ಈ ರೀತಿ ತೀರ್ಪು ಕೊಟ್ಟಿರುವುದು ಬಹಳ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂದರು.
ಸಮಾನತೆ ಹಿಂದೂ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶದಿಂದ ಅದು ಸಾಬೀತಾಗಬೇಕಿಲ್ಲ. ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ. ಹೀಗಾಗಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಷ್ಟೆ. 10 ವರ್ಷದೊಳಗೆ 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರವೇಶಾವಕಾಶವಿದೆ. ಇದರಲ್ಲಿ ಸಮಾನತೆಯ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.












Click it and Unblock the Notifications