ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದಾದೇವಿ ಆಕ್ರೋಶ
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಇದೀಗ ಮೈಸೂರು ರಾಜಮನೆತನದ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್, ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನ ರಾಜಮನೆತನದ ಆಸ್ತಿ ಎಂದಿರುವ ಪ್ರಮೋದಾದೇವಿ ನಮಗೆ ಕೊಟ್ಟರೆ ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 2024ರ ವಿರುದ್ಧ ರಾಜಮನೆತನದವರು ಆಕ್ಷೇಪ ವ್ಯಕ್ತಪಡಿಸಿದ್ದು ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ತುರ್ತು ಸುದ್ದಿಗೋಷ್ಠಿ ನಡೆಸಿದ ಪ್ರಮೋದಾದೇವಿ ಒಡೆಯರ್, ಚಾಮುಂಡೇಶ್ವರಿ ಪ್ರಾಧಿಕಾರ ಕಾಯಿದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಪ್ರಾಧಿಕಾರ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಸರಕಾರ ಚಾಮುಂಡೇಶ್ವರಿ ದೇವಾಲಯದ ಮೇಲೆ ರಾಜಮನೆತನದ ಅಧಿಕಾರ ಮೊಟಕುಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ನಾವು ಜುಲೈ 19ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ಚಾಮುಂಡಿಬೆಟ್ಟ ಪ್ರಾಧಿಕಾರ ಕಾಯಿದೆ ಅಸಂವಿಧಾನಿಕ ಎಂದು ಹೇಳಿ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
1971ರಲ್ಲಿ ಸಂವಿಧಾನಕ್ಕೆ ನಡೆದ 26ನೇ ತಿದ್ದುಪಡಿಯಲ್ಲಿ ರಾಜಮನೆತನಗಳು ತಮ್ಮ ಆಸ್ತಿಯ ವಿವರಗಳನ್ನು ಸಲ್ಲಿಸುವ ಪಟ್ಟಿಯನ್ನು ನೀಡಬೇಕೆಂದು ಅಂದಿನ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ಮೈಸೂರು ರಾಜಮನೆತನ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವೂ ಸೇರಿದಂತೆ ಹಲವಾರು ಆಸ್ತಿಗಳು ತಮಗೆ ಸೇರಿವೆ ಎಂದು ಪಟ್ಟಿ ನೀಡಿತ್ತು. ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಅವರು 1972ರಲ್ಲಿ ಸಹಿ ಹಾಕಿ ಅನುಮೋದಿಸಿದ್ದಾರೆ. ಇದು ಸರ್ಕಾರಿ ಆಸ್ತಿ ಅಲ್ಲ ಎಂದರು.
ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಬಂದ ಎಲ್ಲಾ ಸರ್ಕಾರಗಳು ನಮಗೆ ತೊಂದರೆ ನೀಡಿವೆ. 2001ರಲ್ಲಿ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಚಾಮುಂಡಿಬೆಟ್ಟದಲ್ಲಿ ಇರುವ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳು ಹಾಗೂ ಇತರೆ ಆಸ್ತಿಗಳು ಮೈಸೂರು ರಾಜಮನೆತನಕ್ಕೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು. ಇದು ಹೈಕೋರ್ಟಿನ ವಿಭಾಗೀಯ ಪೀಠದಲ್ಲಿ ಇನ್ನೂ ವಿಚಾರಣೆ ಹಂತದಲ್ಲೇ ಇದೆ ಎಂದು ಹೇಳಿದರು.
ಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರು ಏಕಸದಸ್ಯ ಪೀಠದ ಅಧ್ಯಕ್ಷತೆ ವಹಿಸಿ ಮಧ್ಯಂತರ ಆದೇಶ ನೀಡಿದ್ದು, ಮುಂದಿನ ವಿಚಾರಣೆಯವರೆಗೆ ಕಾಯಿದೆ ಜಾರಿ ಮಾಡದಂತೆ ಸೂಚನೆ ನೀಡಲಾಗಿದೆ. ಈ ಕಾಯಿದೆಯು ಅಸಾಂವಿಧಾನಿಕವಾಗಿದ್ದು, ಶಾಸಕಾಂಗದ ಸಾಮರ್ಥ್ಯವನ್ನು ಮೀರಿ ಜಾರಿಗೊಳಿಸಲಾಗಿದೆ ಮತ್ತು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಶ್ರೀ ಚಾಮುಂಡೇಶ್ವರಿ ದೇವಿಯು ಮೈಸೂರು ರಾಜಮನೆತನದ ಮನೆದೇವತೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದು, ಚಾಮುಂಡಿ ಬೆಟ್ಟದ ಇತರ ದೇವಾಲಯಗಳೊಂದಿಗೆ ಐತಿಹಾಸಿಕವಾಗಿ ಕುಟುಂಬದವರು ನಿರ್ವಹಿಸುವ ಖಾಸಗಿ ಆಸ್ತಿಯಾಗಿದೆ, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿನ ಮಾಲೀಕತ್ವದ ವಿವಾದವು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ, ಈ ದೇವಾಲಯಗಳು ಮತ್ತು ಅವುಗಳ ಆಸ್ತಿಗಳನ್ನು ರಾಜ್ಯ ಸರ್ಕಾರವು ವಶಪಡಿಸಿಕೊಳ್ಳುವುದು ಅಕ್ರಮ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಪ್ರಕರಣದಲ್ಲಿ ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಧಿಕಾರಿ ಹಾಗೂ ಅರಮನೆ ಮುಜರಾಯಿ ಸಂಸ್ಥೆಯ ಅಧ್ಯಕ್ಷರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ. ವಕೀಲ ಮಾನಸಿ ಕುಮಾರ್ ಅವರು ಪ್ರಮೋದಾ ದೇವಿ ಒಡೆಯರ್ ಅವರ ಪರ ವಾದ ಮಂಡಿಸಿದ್ದಾರೆ.











Click it and Unblock the Notifications