ರೆಬೆಲ್ ಸ್ಟಾರ್ ಗೆ 15 ರೂ.ದಂಡ ವಿಧಿಸಿದ್ದ ಸರಸ್ವತಿಪುರಂ ಪೊಲೀಸರು!
ಮೈಸೂರು, ನವೆಂಬರ್.26: ಗೆಳೆಯರ ಗುಂಪು ಕಟ್ಟಿಕೊಂಡು ಹುಡುಗಿಯರನ್ನು ಚುಡಾಯಿಸಿ ಪೊಲೀಸರಿಗೆ 15 ರೂ.ದಂಡ ಕಟ್ಟಿದ್ದ ಅಂಬಿ, ಮುಂದೆ ಬಣ್ಣದ ಲೋಕಕ್ಕೆ ಕಾಲಿಟ್ಟು ಎಲ್ಲರ ನೆಚ್ಚಿನ ನಾಯಕನಾಗಿದ್ದು ಈಗ ಕೇವಲ ನೆನಪು ಮಾತ್ರ.
ಅಂಬರೀಶ್ ಅವರು ಬಾಲ್ಯ ಹಾಗೂ ಯೌವನದ ಸಾಕಷ್ಟು ಸಮಯ ಕಳೆದಿದ್ದು ಮೈಸೂರಿನಲ್ಲಿ. ವಿದ್ಯಾರಣ್ಯಪುರಂನಲ್ಲಿದ್ದ ಭಾವ ಡಾ.ಅಂಕೇಗೌಡರ ಹೆಂಚಿನ ಮನೆಗೆ ಆಗಿಂದಾಗ್ಗೆ ಬಂದು ಹೋಗುತ್ತಿದ್ದರು. ಬಾಲ್ಯದಲ್ಲಿ ಸರಸ್ವತಿಪುರಂ ಎದುರಿನ ಮೈದಾನದಲ್ಲಿ ಟೆನ್ನಿಸ್, ಬಾಡ್ಮಿಂಟನ್ ಕ್ರೀಡೆಗಳನ್ನು ಹೆಚ್ಚು ಆಡುತ್ತಿದ್ದರು.
ಅದು ಯೌವನದ ತುಂಟಾಟದ ಸಮಯ. ಅಮರ ನಾಥ್ ಆಪ್ತರಾಗಿದ್ದ ಸಂಗಾಮ್ ಸೇರಿ ತಮ್ಮದೊಂದು ದೊಡ್ಡ ಪಡೆಯನ್ನೇ ಕಟ್ಟಿಕೊಂಡು ಮನೆ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಯರನ್ನು ಚುಡಾಯಿಸಿ ನಗಿಸುತ್ತಿದ್ದರು. ಎಂದಿಗೂ ಸರಿಯಾದ ಸಮಯಕ್ಕೆ ಮನೆ ಸೇರದ ಅಮರನಾಥ್, ಅಮ್ಮನಿಂದ ಬೈಸಿಕೊಂಡಿದ್ದೇ ಹೆಚ್ಚು.
ಒಮ್ಮೆ ಇವರ ಪುಂಡಾಟ ಸಹಿಸದ ಸರಸ್ವತಿಪುರಂ ಪೊಲೀಸರು 15 ರೂ. ದಂಡ ವಿಧಿಸಿದ್ದರು. ಈ ಬಗ್ಗೆ ಮೈಸೂರಿನ ಸರಸ್ವತಿಪುರಂ ನಿವಾಸಿ ಶಿವಕುಮಾರ್ ಹೇಳಿದ್ದು ಹೀಗೆ...

ಗೆಳೆಯರ ಜೊತೆಗೂಡಿ ಬ್ಯಾಡ್ಮಿಂಟನ್ ಆಟ
"ನಾವು ಚಿಕ್ಕವರಿದ್ದಾಗ ಅಂಬರೀಷ್ ತಮ್ಮ ಗೆಳೆಯರ ಗುಂಪು ಕಟ್ಟಿಕೊಂಡು ಸರಸ್ವತಿಪುರಂ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದರು. ಅವರ 'ವಜ್ರದ ಜಲಪಾತ' ಚಿತ್ರ ಬಿಡುಗಡೆಯಾದಾಗ ಅವರ ತಾಯಿ ನನ್ನ ಮಗನ ಸಿನಿಮಾ ಬಿಡುಗಡೆಯಾಗಿದೆ. ಎಲ್ಲರೂ ಹೋಗಿ ನೋಡಿ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ ಎಂದು ಹೇಳುತ್ತಿದ್ದ ದೃಶ್ಯಗಳು ಕಣ್ಣ ಮುಂದಿದೆ" ಎಂದು ಸರಸ್ವತಿಪುರಂ ನಿವಾಸಿ ಶಿವಕುಮಾರ್ ನೆನಪಿಸಿಕೊಂಡರು.

ಸಾಕಷ್ಟು ಕೀಟಲೆ, ತಮಾಷೆ
86 ವರ್ಷದ ಮೂರ್ತಿ ಅವರು ಅಂಬರೀಷ್ ಅವರ ಒಡನಾಟ ಹಂಚಿಕೊಳ್ಳುತ್ತಾ, ಅಂಬರೀಷ್ ತುಂಬಾ ಒಳ್ಳೆಯ ಹುಡುಗ. ಅವರ ಬಾಲ್ಯದ ದಿನಗಳನ್ನು ನಾನು ನೋಡಿದ್ದೇನೆ. ಸ್ನೇಹಿತರೊಂದಿಗೆ ಸಾಕಷ್ಟು ಕೀಟಲೆ, ತಮಾಷೆ ಮಾಡುತ್ತ ಇರುತ್ತಿದ್ದ. ನನ್ನ ಅಳಿಯ ಮತ್ತು ಅಂಬರೀಷ್ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ಚಿತ್ರರಂಗಕ್ಕೆ ಹೋದ ಮೇಲೆ ಇಲ್ಲಿರುವ ಮನೆಯನ್ನು ತಮ್ಮ ತಂಗಿಗೆ ನೀಡಿದ್ದರು. ಇಲ್ಲಿಗೆ ಬಂದಾಗ ಭೇಟಿಯಾಗುವುದನ್ನು ಮರೆಯುತ್ತಿರಲಿಲ್ಲ' ಎಂದು ಸ್ಮರಿಸಿದರು.

ಸ್ಥಳೀಯರಲ್ಲಿ ಇನ್ನು ಜೀವಂತ
ಕುಟುಂಬ ಸಮೇತ ಮೈಸೂರಿನ ಸರಸ್ವತಿಪುರಂ ಈಜುಕೊಳದ 7ನೇ ಮುಖ್ಯ ರಸ್ತೆಯ ಕಾರ್ನರ್ ಮನೆಯಲ್ಲಿ ವಾಸವಿದ್ದ ಅಂಬರೀಶ್ ಅವರ ಬಾಲ್ಯ ಹಾಗೂ ಯೌವನದ ದಿನಗಳ ನೆನಪುಗಳು ಸ್ಥಳೀಯರಲ್ಲಿ ಇನ್ನು ಜೀವಂತವಾಗಿವೆ.

ಕಲೆ ರಕ್ತದಲ್ಲೇ ಬೆರೆತು ಹೋಗಿತ್ತು
ಅಂಬರೀಷ್ ಮಂಡ್ಯದವರಾದರೂ ಹುಟ್ಟಿದ್ದು ಮೈಸೂರು. ಹಾಗಾಗಿ ಮೈಸೂರೆಂದರೆ ಅವರಿಗೆ ವಿಶೇಷ ಅಭಿಮಾನವಿತ್ತು. ಮೈಸೂರಿನ ಸರಸ್ವತಿಪುರಂನ ತೆಂಗಿನತೋಪು ಬಳಿ ಅಂಬರೀಷ್ ಅವರ ಮನೆಯಿತ್ತು. ಇಲ್ಲಿ ಮನೆ ಮಾತಾಗಿದ್ದ ಪಿಟೀಲು ಚೌಡಯ್ಯ ಅವರ ಮೊಮ್ಮಗನಾಗಿದ್ದ ಅಂಬರೀಷ್ ಅವರಿಗೆ ಕಲೆ ರಕ್ತದಲ್ಲೇ ಬೆರೆತು ಹೋಗಿತ್ತು.












Click it and Unblock the Notifications