ಮೋದಿ ಉದ್ಘಾಟಿಸಲಿರುವ ಕೆಎಸ್‌ಎಸ್ ಸಂಸ್ಕೃತ ಪಾಠ ಶಾಲೆ ವಿಶೇಷತೆ ಏನು?
ಮೈಸೂರು, ಜೂನ್ 20: ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಮೈಸೂರಿಗೆ ಆಮಿಸಲಿದ್ದಾರೆ. ಸಂಜೆ ಅವರು ಜೆಎಸ್‌ಎಸ್ ಸಂಸ್ಥೆಯ ಸಂಸ್ಕೃತ ಪಾಠಶಾಲೆಯ ನೂತನ ಕಟ್ಟಡ ಮತ್ತು ವಿದ್ಯಾರ್ಥಿನಿಲಯವನ್ನು ಉದ್ಘಾಟನೆ ಮಾಡಲಿದ್ದಾರೆ.
ವಿಶ್ವದ ಪ್ರಮುಖ ಭಾಷೆಗಳಲ್ಲಿ ಸಂಸ್ಕೃತ ಭಾಷೆಯು ಅಗ್ರಪಂಕ್ತಿಯಲ್ಲಿದೆ. ಸಂಸ್ಕೃತ ಸಾಹಿತ್ಯವು ಮನುಕುಲದ ಸರ್ವಾಂಗೀಣ ಉನ್ನತಿಗೆ ಸ್ಫೂರ್ತಿಯ ಸೆಲೆಯಾಗಿದೆ. ಸಂಸ್ಕೃತ ಭಾಷೆಯ ಮಹತ್ವವನ್ನು ಮನಗಂಡು, ಸಂಸ್ಕೃತ ಭಾಷೆಯು ಎಲ್ಲರಿಗೂ ತಲುಪವಂತಾಗಬೇಕೆಂದು ಶ್ರೀ ಶಿವರಾತ್ರೀಶ್ವರ ಸ್ವಾಮೀಜಿ 1937ರಲ್ಲಿ ಕೆಎಸ್‌ಎಸ್ ಸಂಸ್ಕೃತ ಪಾಠಶಾಲೆಯನ್ನು ಪ್ರಾರಂಭಿಸಿದರು. ಡಾ. ಶ್ರೀ ರಾಜೇಂದ್ರ ಸ್ವಾಮೀಜಿ ಇದನ್ನು ಮುಂದುವರಿಸಿ, ಅಭಿವೃದ್ಧಿಪಡಿಸಿದರು. ಹಲವಾರು ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕೃತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದರು.
ನಂತರ ಕ್ಯಾತನಹಳ್ಳಿ ಸಾಹುಕಾರ್ ಸಿದ್ಧಲಿಂಗಯ್ಯನವರು ವಾಣಿವಿಲಾಸ ರಸ್ತೆಯಲ್ಲಿರುವ ಕಟ್ಟಡವನ್ನು ಖರೀದಿಸಿ, ಸಂಸ್ಕೃತಾಧ್ಯಯನಕ್ಕಾಗಿ ಸುತ್ತೂರು ಮಠಕ್ಕೆ ನೀಡಿದರು. ಇದನ್ನು ಸರ್ ಮಿರ್ಜಾ ಇಸ್ಮಾಯಿಲ್ ಅವರು 1937ರಲ್ಲಿ ಉದ್ಘಾಟಿಸಿದರು. ಶ್ರೀ ಶಿವರಾತ್ರೀಶ್ವರ ಗುರುಕುಲ ಪ್ರಾರಂಭವಾಗುವುದಕ್ಕೂ ಮೊದಲು ಮಠಾದಿಪತಿಗಳಿಗೆ ಮತ್ತು ಮಠಾಧಿಪತಿಗಳಾಗುವವರಿಗೆ ಇಲ್ಲಿಯೇ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪಾಠಶಾಲೆಯಲ್ಲಿ ವಿಶೇಷ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಂಸ್ಥೆಯ ಇತರ ಎಲ್ಲಾ ಪಾಠಶಾಲೆಗಳು ಹಾಗೂ ಸಂಸ್ಕೃತ ವಿಭಾಗಗಳ ಸಹಯೋಗದಲ್ಲಿ ಪ್ರತಿವರ್ಷ ಸಂಸ್ಕೃತೋತ್ಸವವನ್ನು ಆಚರಿಸಲಾಗುತ್ತಿದೆ. 15 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಪಾಠಶಾಲೆಯಲ್ಲಿ ಈಗ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಗಿದೆ.

ನೂತನ ಕಟ್ಟಡ
ಸುಮಾರು 100 ವರ್ಷಗಳಿಗೂ ಹೆಚ್ಚು ಹಳೆಯದಾಗಿದ್ದ, ಶಿಥಿಲಗೊಂಡಿದ್ದ ಕಟ್ಟಟಡವನ್ನು ತೆಗೆದು ನೂತನ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ನೆಲಮಾಳಿಗೆ ಸೇರಿ ಐದು ಅಂತಸ್ತಿದ್ದು, 24510 ಚದರ ಅಡಿ ವಿಸ್ತೀರ್ಣವುಳ್ಳದ್ದಾಗಿದೆ. ತರಗತಿ ಕೊಠಡಿಗಳು, ಗ್ರಂಥಾಲಯ, ಆಡಳಿತ ಕಛೇರಿಗಳ ಜೊತೆಗೆ ವಿದ್ಯಾರ್ಥಿನಿಲಯದಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಸ್ತವ್ಯಕ್ಕೆ ಅನುಕೂಲವಿದೆ. ಅತ್ಯಾಧುನಿಕ ಅಡುಗೆ ಮನೆ, ವಿಸ್ತಾರವಾದ ಭೋಜನ ಶಾಲೆ ಇದೆ. ಇಲ್ಲಿ ಅಸನ-ವಸತಿಗಳ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಯೋಗ, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗಿದೆ.

ಬಿಡುಗಡೆಯಾಗುವ ಪುಸ್ತಕಗಳು ಯಾವುದು?
ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಪತಂಜಲಿ ಯೋಗ ಸೂತ್ರಗಳು', 'ಶಿವಸೂತ್ರ', 'ನಾರದ ಭಕ್ತಿ ಸೂತ್ರ' ಎಂಬ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಪತಂಜಲಿ ಯೋಗಸೂತ್ರಗಳು ಕಂಠಹಾರದ ಮುತ್ತುಗಳನ್ನು ಪೋಣಿಸಿರುವಂಥ ಬೋಧನೆಗಳ ಒಂದು ಸರಣಿ. ಇದು 196 ಶ್ಲೋಕಗಳುಳ್ಳ ಗ್ರಂಥ. ಹೆಸರೇ ಸೂಚಿಸುವಂತೆ ಶಿವಸೂತ್ರವು ಭಕ್ತಿಗೆ ಸಂಬಂಧಿಸಿದಂಥ ಸೂತ್ರಗಳ ಸಂಕಲನ. ನಾರದ ಭಕ್ತಿಸೂತ್ರವು ಭಕ್ತಿಗೆ ಸಂಬಂಧಪಟ್ಟ ಸೂತ್ರಗಳ ಸಂಗ್ರಹ ಸುಮಾರು 12ನೆಯ ಶತಮಾನದ ವೇಳೆಗೆ ಈ ಕೃತಿ ರಚಿತವಾಗಿರಬಹುದೆಂಬುದು ವಿದ್ವಾಂಸರ ಅಭಿಮತವಾಗಿದೆ.
ಇಂದು ಕಾರ್ಯಕ್ರಮ
ಜೂನ್ 20 ರಂದು ಮೈಸೂರಿನ ಶ್ರೀಸುತ್ತೂರು ಮಠಕ್ಕೆ ಪ್ರಧಾನಮಂತ್ರಿ ಮೋದಿ ಮೈಸೂರು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರುಮಠದಲ್ಲಿ ಏರ್ಪಡಿಸಿರುವ ಕೆ.ಎಸ್.ಎಸ್. ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡದ ಉದ್ಫಾಟಿಸಿ ಹಾಗೂ 3 ಕೃತಿಗಳ ಬಿಡುಗಡೆ ಮಾಡಲಿದ್ದಾರೆ.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಸಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪಸಿಂಹ, ಶಾಸಕ ಎಸ್.ಎ.ರಾಮದಾಸ್ ಭಾಗವಹಿಸಲಿದ್ದಾರೆ.












Click it and Unblock the Notifications