ಗುಂಡುಮೇಟ್ಲು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಹುಲಿ ದಾಳಿ:ವ್ಯಕ್ತಿ ಸಾವು
ಮೈಸೂರು, ಜನವರಿ 28:ಎಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಸಮೀಪ ಗುಂಡುಮೇಟ್ಲು ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದೆ.
ಗ್ರಾಮಕ್ಕೆ ನುಗ್ಗಿದ ಹುಲಿ, ವ್ಯಕ್ತಿ ಮನೆಯಿಂದ ಹೊರ ಬರುತ್ತಿದ್ದಂತೆ ಆಕ್ರಮಣ ನಡೆಸಿ ಹೊತ್ತೊಯ್ದಿದೆ.ಆಗ ಗ್ರಾಮಸ್ಥರು ತಕ್ಷಣ ಹುಲಿಯನ್ನು ಹಿಂಬಾಲಿಸಿದ್ದಾರೆ. ಆದರೆ ಅಷ್ಟರೊಳಗೆ ಹುಲಿ ದಾಳಿಗೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆ ನಂತರ ಗ್ರಾಮಸ್ಥರ ಚೀರಾಟ ಕೇಳಿದ ಹುಲಿ ಹೆದರಿ ಮೃತ ದೇಹವನ್ನು ಅಲ್ಲೇ ಬಿಟ್ಟು ಹೋಗಿದೆ.
ಹುಲಿ ದಾಳಿಗೆ ಸಾವನ್ನಪ್ಪಿದ ವ್ಯಕ್ತಿಯ ಹೆಸರು ಚಿನ್ನಪ್ಪ (40). ಮೊದಲೇ ಗ್ರಾಮದ ಒಳಗೆ ನುಸುಳಿದ ವ್ಯಾಘ್ರ ಏಕಾಏಕಿ ಚಿನ್ನಪ್ಪನ ಮೇಲೆ ದಾಳಿ ನಡೆಸಿದೆ. ಚಿನ್ನಪ್ಪ ಮಚ್ಚೂರು ಸಮೀಪ ಹುಲ್ಲುಮೊಟ್ಟಲು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಗ್ರಾಮದ ಒಳ ನುಸುಳಿ ಚಿನ್ನಪ್ಪನನ್ನು ಸುಮಾರು 200 ಮೀ.ದೂರ ಹುಲಿ ಹೊತ್ತೊಯ್ದಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.












Click it and Unblock the Notifications