ಕನ್ನ ಹಾಕುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವನಿಗೆ ಬಿತ್ತು ಗೂಸ
ಮೈಸೂರು, ಜನವರಿ 4: ದೇವಸ್ಥಾನಕ್ಕೆ ದೇಣಿಗೆ ನೀಡುವ ನೆಪದಲ್ಲಿ ಬಂದು ಮನೆಗಳಲ್ಲೇ ಉಳಿದುಕೊಂಡು, ಅವರನ್ನು ನಂಬಿಸಿ ಕಳ್ಳತನ ಮಾಡುತ್ತಿದ್ದವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಸ್ಥಳೀಯರೇ ಥಳಿಸಿರುವ ಘಟನೆ ಮೈಸೂರಿನ ರಾಮಾನುಜ ರಸ್ತೆಯಲ್ಲಿ ನಡೆದಿದೆ.
ಪಂಚೆ, ಶಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಈತ ಮನೆಯವರನ್ನು ಚೆನ್ನಾಗಿ ನಂಬಿಸಿ ಮೋಸ ಮಾಡುತ್ತಿದ್ದ. ಅವರಿಗೇ ತಿಳಿಯದಂತೆ ಕಳ್ಳತನ ಮಾಡುತ್ತಿದ್ದ.
ಹಾಗೆಯೇ ಇಂದು ರಾಮಾನುಜ ರಸ್ತೆಯಲ್ಲಿರುವ ಅರ್ಚಕ ವ್ಯಾಸತೀರ್ಥಾಚಾರ್ಯರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಇದೇ ವೇಷದಲ್ಲಿ ಇವರ ಮನೆಗೆ ಬಂದಿದ್ದ ಈತ 50 ಸಾವಿರ ರೂ. ಕದ್ದಿದ್ದ. ಇದೀಗ ಮನೆಯವರನ್ನು ಬೆಂಗಳೂರಿಗೆ ಕರೆಸಿ ಇಲ್ಲಿ ಬಂದು ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದ. ಎರಡನೇ ಬಾರಿ ಕದಿಯಲು ಬಂದು ಜನರ ಕೈಗೆ ಸಿಕ್ಕಿಬಿದ್ದ.

ಭದ್ರಾವತಿಯ ಪ್ರವೀಣ್ ಎಂದು ಹೇಳಿಕೊಂಡಿರುವ ಈತನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ನಂತರ ಕೆ.ಆರ್.ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆಗೆ ನುಗ್ಗಿ ಸರ ಕಸಿಯಲು ಪ್ರಯತ್ನಿಸಿದ ಕಳ್ಳ ಅಂದರ್: ಇಲ್ಲಿನ ಹೊಸಕೇರಿ 5ನೇ ಕ್ರಾಸ್ ನಲ್ಲಿನ ಮನೆಯೊಂದರಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿದ ಕಳ್ಳನೊಬ್ಬ ಮನೆಗೆ ನುಗ್ಗಿ ಆಕೆಯಿಂದ ಸರ ಕಸಿಯಲು ಪ್ರಯತ್ನಿಸಿದ್ದಾನೆ. ಗಾಬರಿಗೊಂಡು ಮಹಿಳೆ ಚೀರಾಡಲು ಆರಂಭಿಸಿದ್ದು, ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಅವನನ್ನು ಜನರೇ ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications