ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು; ಸಚಿವ ಎನ್. ಚೆಲುವರಾಯಸ್ವಾಮಿ
ವ್ಯವಸಾಯದ ಮೇಲಿನ ನಿರಾಸಕ್ತಿಯಿಂದ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರಿಗೆ ಬೆನ್ನೆಲುಬಾಗಿರುವ ಸರ್ಕಾರವು ಅವರಿಗೆ ಕೃಷಿ ಹಾಗೂ ವ್ಯವಸಾಯದಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸವನ್ನು ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವೂ ಯಾವಾಗಲೂ ರೈತರ ಪರ ಇರುತ್ತದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ನೀಡಿದರು.
ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ. ಗ್ರೌಂಡ್ಸ್‌ನ ವೈದ್ಯಕೀಯ ಮಹಾವಿದ್ಯಾಲಯದ ಆಲುಮ್ನಿ ಅಸೋಸಿಯೇಷನ್ ಸಭಾಭವನದಲ್ಲಿ ನಡೆದ ರೈತ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ ರೈತರಿಗೆ ಸಹಕಾರಿಯಾಗಿದ್ದು, ಗ್ಯಾರಂಟಿಗಳನ್ನು ಇನ್ನೂ ಹೆಚ್ಚಿನ ರೈತರಿಗೆ ಜನ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.

ಸರ್ಕಾರವು ಜಾರಿಗೆ ತಂದಿರುವ ಹೊಸ-ಹೊಸ ಯೋಜನೆಗಳು ರೈತರಿಗೆ ಸಹಕಾರಿಯಾಗುತ್ತಿದ್ದು, ಮುಂದೆ ರೈತರ ಜಾನುವಾರುಗಳಿಗೆ ವಿಮೆಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತದೆ. ಕೆಲವು ರೈತರು ಸಾಕಿರುವ ಹಳ್ಳಿಕಾರ್ ಎತ್ತುಗಳಿಗೆ 8 ರಿಂದ 10 ಲಕ್ಷ ಇದೆ. ಆಕಸ್ಮಿಕವಾಗಿ ಅವು ಮೃತಪಟ್ಟರೆ ರೈತರಿಗೆ ಆ ನಷ್ಟ ಭರಿಸಲು ಆಗಲ್ಲ ಹೀಗಾಗಿ ವಿಮೆಯನ್ನು ಜಾರಿಗೆ ತರುವಂತೆ ಪಶುಸಂಗೋಪನಾ ಸಚಿವರಲ್ಲಿ ಮನವಿ ಮಾಡಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಜಾರಿಗೆ ತರುವ ಕೆಲಸವನ್ನು ಮಾಡುತ್ತೇವೆ ಎಂದರು.
ಪಶುಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಮಾತನಾಡಿ, ದಸರಾ ಮಹೋತ್ಸವದಲ್ಲಿ ಎಲ್ಲಾ ರೀತಿಯ ಕಾರ್ಯಕ್ರಮವನ್ನೂ ನಡೆಸುತ್ತಾ ಬಂದಿದ್ದೇವೆ. ಅದರಲ್ಲೂ ವಿಶೇಷವಾಗಿ ರೈತರಿಗೆ ಎಲ್ಲಾ ರೀತಿಯ ಅನುಕೂಲ ಮತ್ತು ಸಹಕಾರಿಯಾಗುವಂತಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದರು.
ರೈತರು ಅಧುನಿಕದ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಸಣ್ಣ ರೈತರಿಗೆ ಈ ರೀತಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಣ್ಣ ರೈತರಿಗೆ ಅನುಕೂಲವಾಗುವಂತಹ ಯೋಜನೆ ತರಬೇಕು. ಈ ಕುರಿತು ಸಿಎಂ ಜೊತೆ ಚರ್ಚಿಸಿ ಯೋಜನೆಯನ್ನು ರೂಪಿಸುತ್ತೇವೆ ಎಂದು ತಿಳಿಸಿದರು.
ಕೃಷಿ ವಿಭಾಗದಲ್ಲಿ ಸಾಧನೆ ಮಾಡಿರುವ ರೈತರಿಗೆ ಸನ್ಮಾನಿಸಲಾಯಿತು. ಕೃಷಿಯ ವಿಜ್ಞಾನಿಗಳು ರೈತರಿಗೆ ಕೃಷಿಯ ಬಗ್ಗೆ ಶ್ರೀ ಗಂಧದ ಬೇಸಾಯ ಮತ್ತು ಮಾರುಕಟ್ಟೆ, ರೈತರ ಆದಾಯ ವೃದ್ಧಿಗಾಗಿ ಸುಸ್ಥಿರ ಕೃಷಿ ಮತ್ತು ವಿದೇಶಿ ತರಕಾರಿ ಮತ್ತು ಹಣ್ಣುಗಳ ಬೇಸಾಯ ತಾಂತ್ರಿಕತೆ ಜೊತೆಗೆ ಬೆಳೆಯ ಉಪಯೋಗ, ಫಲವತ್ತತೆಯ ಮಾರ್ಗ, ಮಾರುಕಟ್ಟೆ, ನೀರಾವರಿ ಯೋಜನೆ ಮತ್ತು ಮಧ್ಯವರ್ತಿ ಇಲ್ಲದೆ ಬೆಳೆಯನ್ನು ನಿಗದಿತ ಪ್ರಮಾಣದಲ್ಲಿ ಮಾರುವುದನ್ನು ವೈಜ್ಞಾನಿಕ ಕಾರಣ ಹಾಗೂ ಆಧುನಿಕ ಕಾಲದ ಕೃಷಿಯ ಬಗ್ಗೆ ಮಾಹಿತಿ ನೀಡಿದರು.












Click it and Unblock the Notifications