ಮೈಸೂರು : ಬದನವಾಳು ಸತ್ಯಾಗ್ರಹ ಏಕೆ, ಏನು?
ಮೈಸೂರು, ಏ. 11 : ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇಲ್ಲಿನ ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣದ ಚಾವಣಿ ಇಲ್ಲದ ಅಪೂರ್ಣ ಮಂಟಪಕ್ಕೆ ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಒಂದು ಹೋಗಿದ್ದಾರೆ. 'ಬದನವಾಳು ಸತ್ಯಾಗ್ರಹ'ಕ್ಕೆ ತಮ್ಮ ಬೆಂಬಲ ನೀಡಿದ್ದಾರೆ.
ಮೈಸೂರು ಜಿಲ್ಲೆಯ ದಕ್ಷಿಣ ತುದಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಅಂಟಿಕೊಡಂತಿರುವ ಬದನವಾಳು ಗ್ರಾಮದಲ್ಲಿ ಏ.19ರಂದು 'ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ' ನಡೆಯಲಿದೆ. 'ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟ'ವು ಬದನವಾಳು ಸತ್ಯಾಗ್ರಹ ಹಾಗೂ ರಾಷ್ಟ್ರೀಯ ಸಮಾವೇಶಕ್ಕೆ ಕರೆ ನೀಡಿದೆ.

ರಂಗಕರ್ಮಿ ಪ್ರಸನ್ನ ಅವರ ತಂಡ ಬದನವಾಳು ಸತ್ಯಾಗ್ರಹ ಮತ್ತು ರಾಷ್ಟ್ರೀಯ ಸಮಾವೇಶದ ನೇತೃತ್ವ ವಹಿಸಿದ್ದು, ಗ್ರಾಮದಲ್ಲಿ ಬೀಡುಬಿಟ್ಟಿದೆ. ಬಾಲಿವುಡ್ ನಟ ಇರ್ಫಾನ್ ಖಾನ್ ಈ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ ಮತ್ತು ಒಂದು ದಿನ ಪತ್ನಿಯೊಡನೆ ಇಲ್ಲಿಗೆ ಬಂದು ಗುರುಗಳಾದ ಪ್ರಸನ್ನ ಅವರೊಂದಿಗೆ ಮಾತುಕತೆ ನಡೆಸಿ ವಾಪಸ್ ತೆರಳಿದ್ದಾರೆ. [ರಂಗಕರ್ಮಿ ಪ್ರಸನ್ನ face book ಪುಟ]
ಯಂತ್ರ ನಾಗರೀಕತೆ ನಿಗ್ರಹಿಸೋಣ : 'ಯಂತ್ರ ನಾಗರೀಕತೆ ನಿಗ್ರಹಿಸೋಣ, ಶ್ರಮ ಸಹಿತ ಸರಳ ಬದುಕನ್ನು ಪೋಷಿಸೋಣ' ಎಂಬ ಉದ್ದೇಶದೊಂದಿದೆ ಈ ಸತ್ಯಾಗ್ರಹ ಮತ್ತು ಸಮಾವೇಶ ಏ. 19ರಂದು ನಡೆಯಲಿದೆ. ಆದರೆ, ಅದಕ್ಕೂ ಮೊದಲೇ ಹಲವು ಹೋರಾಟಗಾರರು ಇಲ್ಲಿಗೆ ಆಗಮಿಸಿದ್ದಾರೆ.
ಬಿರುಕುಬಿಟ್ಟ ಗೋಡೆಗಳು, ಜಾರುತ್ತಿರುವ ನಾಡ ಹೆಂಚುಗಳು, ಕುರುಚಲು ಪೊದೆ, ಮುಳ್ಳುಗಿಡಗಳ ನಡುವಿನ ಸ್ಥಳದಲ್ಲಿ ಪ್ರಸನ್ನ ಅವರ ತಂಡ ವಾಸ್ತವ್ಯ ಹೂಡಿದೆ. ಗ್ರಾಮದ ರೈತರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ ಸತ್ಯಾಗ್ರಹದ ಕುರಿತು ರೂಪುರೇಷೆ ತಯಾರಿಸಿವೆ.

ಖಾದಿ ಕೇಂದ್ರ ಆಕರ್ಷಣೆ : ಬದನವಾಳು ಗ್ರಾಮದಲ್ಲಿ ಖಾದಿ ಕೇಂದ್ರವೊಂದಿದೆ. 1925ರಲ್ಲಿ ಗಾಂಧಿವಾದಿ ತಗಡೂರು ರಾಮಚಂದ್ರರಾಯರು ಗ್ರಾಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರವೊಂದನ್ನು ಆರಂಭಿಸಿದ್ದರು. ಮಹಾತ್ಮ ಗಾಂಧಿ ಅವರು 1932ರಲ್ಲಿ ಈ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಗ ಸ್ಥಾಪನೆಯಾಗಿದ್ದ ಖಾದಿ ಕೇಂದ್ರ ಈಗಲೂ ಕಾರ್ಯಪ್ರವೃತ್ತವಾಗಿದೆ.
ಈಗಿನ ಸರ್ಕಾರಗಳು ಕೇವಲ ನಗರ ಪಟ್ಟಣಗಳ ಅಭಿವೃದ್ಧಿಯತ್ತ ಗಮನಹರಿಸಿ ಹಳ್ಳಿಗಳನ್ನು ಸೊರಗುವಂತೆ ಮಾಡಿವೆ. ಇದು ಹಳ್ಳಿಗರಿಗೆ ತಲೆನೋವಾಗಿ ಪರಿಣಮಿಸಿದ್ದು, ಹಳ್ಳಿಗರಿಗೆ ಸುಸ್ಥಿರ ಬದುಕು ಕಟ್ಟಲು ಒತ್ತಾಯಿಸಿ ಈ ಸತ್ಯಾಗ್ರಹ ನಡೆಸುತ್ತಿರುವುದಾಗಿ ರಂಗಕರ್ಮಿ ಪ್ರಸನ್ನ ಅವರು ಹೇಳಿದ್ದಾರೆ.

ಬೇಡಿಕೆಗಳಿಲ್ಲ, ಅರಿವು ಮೂಡಿಸುವುದು ಗುರಿ : ಸತ್ಯಾಗ್ರಹಿಗಳು ಸರ್ಕಾರದ ಮುಂದೆ ಯಾವುದೇ ಬೇಡಿಕೆ ಇಡುತ್ತಿಲ್ಲ. ಕೇವಲ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ. ಈಗಿನ ಎಲ್ಲಾ ಪಕ್ಷಗಳೂ ಯಂತ್ರ ನಾಗರಿಕತೆಯಿಂದ ಅಂಕಿ ಅಂಶದ ಮೇಲೆ ದೇಶ ಕಟ್ಟಲು ಹೊರಟಿವೆ ಇದರ ವಿರುದ್ಧ ಅರಿವು ಮೂಡಿಸುವುದು ಸತ್ಯಾಗ್ರಹದ ಪ್ರಮುಖ ಉದ್ದೇಶವಾಗಿದೆ.
ಸತ್ಯಾಗ್ರಹಕ್ಕೆ ಬೆಂಬಲ : ರೈತ ಸಂಘ, ಪಶ್ಚಿಮಘಟ್ಟಗಳ ಹೋರಾಟ ಸಮಿತಿ, ಕಲಾವಿದರು, ಬರಹಗಾರರು, ವಿವಿಧ ಸಂಘ-ಸಂಸ್ಥೆಗಳು, ಪರಿಸರವಾದಿಗಳು, ಎಸ್.ಆರ್. ಹಿರೇಮಠ, ನಟ ಇರ್ಫಾನ್ ಖಾನ್, ಪ್ರಕಾಶ್ ರೈ, ರಂಗಾಯಣ ರಘು ಮುಂತಾದವರು ಈ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ.












Click it and Unblock the Notifications