ಪಾಪದಪಿಂಡ ಸಿದ್ದರಾಮಯ್ಯ ಹುಟ್ಟಿದ ಜಾಗದಲ್ಲೇ ಮುಗಿಸಿಬಿಡಿ: ಸಚಿವ ಹೆಗಡೆ
Recommended Video

ಮೈಸೂರು, ಡಿಸೆಂಬರ್ 5: "ಸಿದ್ದರಾಮಯ್ಯ ಪಾಪದ ಪಿಂಡ. ಅದು ಎಲ್ಲಿ ಹುಟ್ಟಿದೆಯೋ ಅಲ್ಲಿಯೇ ಮುಗಿಸಿ ಬಿಡಬೇಕು" ಎಂಬ ಮಾತುಗಳನ್ನಾಡುವ ಮೂಲಕ ಕೇಂದ್ರ ಕೌಶಲಾಭಿವೃದ್ಧಿಯ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಸೋಮವಾರ ಮುಖ್ಯಮಂತ್ರಿ ವಿರುದ್ಧ ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ರಾಜ್ಯ ನಾಯಕರು ಮೃದು ಧೋರಣೆಯನ್ನೇ ಇಟ್ಟುಕೊಂಡಿದ್ದರೆ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕೂಡ ಹೇಳಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರ ಯಾರಿಗೂ ಬೇಡವಾದ ಪಾಪದ ಪಿಂಡ. ಅದನ್ನು ಕಿತ್ತೊಗೆಯದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ನಮ್ಮ ಪಕ್ಷದಲ್ಲಿ ಕೆಟ್ಟದ್ದನ್ನು ಆಡಬಾರದು, ನೋಡಬಾರದು ಹಾಗೂ ಕೇಳಬಾರದು ಎಂಬ ಮನಸ್ಥಿತಿಯಲ್ಲಿ ಹಲವರಿದ್ದಾರೆ. ಅವರು ಬದಲಾವಣೆ ಆಗಬೇಕು. ಇಲ್ಲದಿದ್ದರೆ ಅಂಥ ಹೇಡಿಗಳು ಪಕ್ಷ ಬಿಟ್ಟು ಹೋಗಲಿ ಎಂದಿದ್ದಾರೆ.
ಪ್ರತಾಪ ಸಿಂಹ ಅವರನ್ನು ಬಂಧಿಸಿದ ಹಾಗೆ ಉತ್ತರ ಕನ್ನಡದ ಸಂಸದರನ್ನು ಬಂಧಿಸಿದ್ದರೆ ಇಷ್ಟು ಹೊತ್ತಿಗೆ ಇಡೀ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಅಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಅಂಥ ತಾಕತ್ತಿದೆ. ಇಂಥ ತಾಕತ್ತು ಮೈಸೂರಿನ ಬಿಜೆಪಿ ನಾಯಕರಿಗೆ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಪೊಲೀಸರಿಗೆ ಜಾಗ ಇಲ್ಲದಂತಾಗಬೇಕು
ಇನ್ನೂ ಮುಂದುವರಿದು, ಕಾರ್ಯಕರ್ಯರು ಎದ್ದು ನಿಂತುಕೊಂಡರೆ ಪೊಲೀಸರಿಗೆ ಜಾಗವೇ ಇಲ್ಲದ ಹಾಗೆ ಆಗಬೇಕು. ಇಂಥ ಶಕ್ತಿ- ತಾಕತ್ತು ಅವರಲ್ಲಿ ನಾಯಕರಾದವರು ತುಂಬ ಬೇಕು ಎಂದು ಕೂಡ ಹೇಳಿದ್ದಾರೆ.

ಹದಿನೈದರಲ್ಲಿ ಹತ್ತು ಸ್ಥಾನ ಗೆಲ್ಲಬೇಕು
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು ಹದಿನೈದು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅವುಗಳಲ್ಲಿ ಹತ್ತನ್ನಾದರೂ ಗೆಲ್ಲದ ಹೊರತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಒಂದು ವೇಳೆ ಅಷ್ಟು ಸ್ಥಾನ ಗೆಲ್ಲದಿದ್ದರೆ ಬಿಜೆಪಿಯು ಕಾವೇರಿ ನದಿಯಲ್ಲಿ ಮುಳುಗುತ್ತದೆ ಎಂದಿದ್ದಾರೆ.

ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್
ಟಿಕೆಟ್ ಗಾಗಿ ಕಿತ್ತಾಡ ಬೇಡಿ, ಜಗಳ ಆಡಬೇಡಿ. ಫೋಟೋಗಳಿಗೆ ಮುಖ ತೋರಿಸೋರು ಯಾರು, ಚಮಚಾಗಳು ಯಾರು ಅಂತ ಬಿಜೆಪಿ ಹೈಕಮಾಂಡ್ ಗೆ ಗೊತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್ ನೀಡಲಾಗುವುದು.

ಗೆಲ್ಲುವವರನ್ನು ಪಕ್ಷಕ್ಕೆ ಕರೆತನ್ನಿ
ಒಂದು ವೇಳೆ ಗೆಲ್ಲುವ ಅಭ್ಯರ್ಥಿಗಳಿಗೆ ಬೇರೆ ಪಕ್ಷದಲ್ಲಿದ್ದರೆ ಅವರನ್ನು ಕರೆದುಕೊಂಡು ಬಂದು ಬಿಜೆಪಿ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಆ ಅಭ್ಯರ್ಥಿಯನ್ನೇ ಮುಗಿಸಬೇಕು ಎಂದಿದ್ದಾರೆ.












Click it and Unblock the Notifications