ನನ್ನನ್ನು ಯಾವ ಅಧಿಕಾರಿಯೂ ಕಮಿಷನ್ ಕೇಳಿಲ್ಲ: ಪಂಡಿತ್ ತಾರಾನಾಥ್ ಸ್ಪಷ್ಟನೆ
ಮೈಸೂರು, ಅಕ್ಟೋಬರ್ 14: ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ದಸರಾ ಅಧಿಕಾರಿಗಳು ಅವರಿಗೆ ಕಾರ್ಯಕ್ರಮ ನೀಡಲು ನೀಡುವ ಸಂಭಾವನೆಯಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ವಾಸ್ತವವಲ್ಲ ಎಂದು ಪಂಡಿತ್ ತಾರಾನಾಥ್ ಸ್ಪಷ್ಟನೆ ನೀಡಿದ್ದಾರೆ.
ನಾಡಹಬ್ಬ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ದಸರಾ ಅಧಿಕಾರಿಗಳು ಅವರಿಗೆ ಕಾರ್ಯಕ್ರಮ ನೀಡಲು ನೀಡುವ ಸಂಭಾವನೆಯಲ್ಲಿ 3 ಲಕ್ಷ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ತಾರಾನಾಥರು ಕಮಿಷನ್ ಕೊಡಲು ಒಪ್ಪದಿದ್ದಕ್ಕೆ ಅವರ ಕಾರ್ಯಕ್ರಮಕ್ಕೆ ಕತ್ತರಿ ಹಾಕಲಾಗಿತ್ತು ಎಂದು ಆರೋಪಿಸಲಾಗಿತ್ತು.

ಸ್ಥಳೀಯ ಪತ್ರಿಕೆ ಆಂದೋಲನದಲ್ಲಿ ಪಂಡಿತ್ ತಾರಾನಾಥ್ ಅವರಿಂದ ಅಧಿಕಾರಿಗಳು ಕಮಿಷನ್ ಕೇಳಿದ್ದಾರೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ವಿರೋಧ ಪಕ್ಷಗಳು ಸೇರಿದಂತೆ ರಾಜ್ಯದಾದ್ಯಂತ ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಹಿರಿಯ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ನನ್ನನ್ನು ಯಾವ ಅಧಿಕಾರಿಯೂ ಕಮಿಷನ್ ಕೇಳಿಲ್ಲ ಎಂದು ಪಂಡಿತ್ ತಾರಾನಾಥ್ ಅವರು ಹೇಳಿದ್ದಾರೆ.
ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕಾರಿಗಳು ಅವರೊಂದಿಗೆ ಸಂಭಾಷಣೆ ನಡೆಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಪಂಡಿತ್ ತಾರಾನಾಥ್ ಅವರು ನನ್ನನ್ನು ಯಾವ ಅಧಿಕಾರಿಯೂ ಕಮಿಷನ್‌ಗಾಗಿ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂದ ಎಕ್ಸ್‌ನಲ್ಲಿ ಸಿದ್ದರಾಮಯ್ಯ ಅವರು ಅಪಪ್ರಚಾರಗಳಿಗೆ ಕಿವಿಗೊಡದಿರಿ. ನಾಡಹಬ್ಬ ದಸರಾವನ್ನು ಯಾವುದೇ ಲೋಪ-ದೋಷಗಳಿಗೆ ಅವಕಾಶಗಳು ಇಲ್ಲದಂತೆ ಆಯೋಜಿಸಿ ಯಶಸ್ವಿಗೊಳಿಸುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಅಪಪ್ರಚಾರಗಳಿಗೆ ಕಿವಿಗೊಡದಿರಿ..
— CM of Karnataka (@CMofKarnataka) October 14, 2023
ನಾಡಹಬ್ಬ ದಸರಾವನ್ನು ಯಾವುದೇ ಲೋಪ-ದೋಷಗಳಿಗೆ ಅವಕಾಶಗಳು ಇಲ್ಲದಂತೆ ಆಯೋಜಿಸಿ ಯಶಸ್ವಿಗೊಳಿಸುತ್ತೇವೆ. #ನಾಡಹಬ್ಬದಸರಾ2023 pic.twitter.com/KyR32LAlmV
ಇನ್ನು ಕಮಿಷನ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ಸಿ ಮಹದೇವಪ್ಪ ಅವರು ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದೇನೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದರು.
ದಸರಾ ಉತ್ಸವದಲ್ಲಿ ತಮಗೆ ನೀಡುವ ಸಂಭಾವನೆಯಲ್ಲಿ ಮೂರು ಲಕ್ಷ ರೂಪಾಯಿ ಕಮಿಷನ್ ಕೇಳಲಾಯಿತು. ಹೀಗೆ ಕಮೀಷನ್ ಕೇಳಿದವರಿಗೆ ಛೀಮಾರಿ ಹಾಕಿದ್ದೇನೆ. ಕಾರ್ಯಕ್ರಮ ನೀಡದಿದ್ದರೂ ಪರವಾಗಿಲ್ಲ. ಇಂತಹ ಕಮಿಷನ್ ವ್ಯವಹಾರವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಪಂಡಿತ್ ರಾಜೀವ್ ತಾರಾನಾಥ್ ಅವರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿತ್ತು. ಇದು ಸಹಜವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.












Click it and Unblock the Notifications