Mysuru: ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಕಾಳು ಹಾಕುವಂತಿಲ್ಲ
ಮೈಸೂರು ಅರಮನೆ ಮುಂದೆ ಇನ್ನು ಗುಂಪು ಗುಂಪಾಗಿ ಪಾರಿವಾಳಗಳನ್ನು ನೋಡಲು ಕಷ್ಟವಾಗಬಹುದು. ಪಾರಿವಾಳ ಗುಂಪಾಗಿ ಮೇಯುವುದು, ಹಾರುವುದು ನೋಡಲು, ಅವುಗಳ ಮುಂದೆ ಫೋಟೊ, ವಿಡಿಯೋ ಮಾಡಿಕೊಳ್ಳಲು ಚಂದವೇ ಎನಿಸಿದರೂ, ಹಲವು ಅಪಾಯಗಳು ಕೂಡ ಇದೆ. ಪಾರಿವಾಳಗಳಿಂದ ಪಾರಂಪರಿಕ ಕಟ್ಟಡಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದ ನಂತರ, ಅರಮನೆ ಆವರಣದ ಮುಂದೆ ಪಾರಿವಾಳಗಳಿಗೆ ಇನ್ನು ಮುಂದೆ ಕಾಳು ಹಾಕುವುದನ್ನು ನಿಲ್ಲಿಸಲಾಗಿದೆ.
ಅರಮನೆ ಆವರಣದ ಮುಂಭಾಗ ದಿನ ನಿತ್ಯ ಪಾರಿವಾಳಗಳಿಗೆ ಕಾಳು, ಆಹಾರ ನೀಡಲಾಗುತ್ತಿತ್ತು. ಕಾಳು ತಿಂದ ಬಳಿಕ ಪಾರಿವಾಳಗಳು ಅರಮನೆ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಪ್ರತಿಮೆಗಳ ಮೇಲೆ ಕುಳಿತು ಹಿಕ್ಕೆ ಹಾಕುತ್ತಿದ್ದವು ಇದರಿಂದ ಕಟ್ಟಡಗಳಿಗೆ ಹಾನಿಯಾಗುತ್ತಿದ್ದು, ಸಾಕಷ್ಟು ದೂರು ಕೇಳಿಬಂದಿತ್ತು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಧಾನ ಸಭೆ ನಡೆಸಿದ್ದು ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ಬ್ರೇಕ್ ಬಿದ್ದಿದೆ. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಂಸದ ಯದುವೀರ್ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಾರಿವಾಳಗಳಿಂದ ಅಪಾರ ಹಾನಿ
ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಆಗುವ ಹಾನಿಗಳ ಬಗ್ಗೆ ಇತಿಹಾಸ ತಜ್ಞ ಪ್ರೊ.ರಂಗರಾಜು ಸಂಪೂರ್ಣ ಮಾಹಿತಿ ನೀಡಿದರು. ಪಾರಿವಾಳಗಳಿಗೆ ಆಹಾರ ನೀಡುವ ಮೊದಲು ಅವುಗಳ ಸಂಖ್ಯೆ 300 ಇತ್ತು, ಈಗ ಪಾರಿವಾಳಗಳ ಸಂಖ್ಯೆ 3000 ದಾಟಿದೆ. ಪಾರಿವಾಳ ಸತ್ತಾಗ ತಿನ್ನಲು ಬರುವ ಹೆಗ್ಗಣಗಳು ಬಿಲ ತೋಡುತ್ತವೆ. ಈಗಾಗಲೇ ಅರಮನೆ ಆವರಣದ ಬಳಿ 300 ಬಿಲಗಳನ್ನು ಮಾಡಿಕೊಂಡಿವೆ, ಆದ್ದರಿಂದ ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಡಾ. ಮಧು ಮಾತನಾಡಿ, ಪಾರಿವಾಳಗಳು ಸಾರ್ವಜನಿಕ ಸ್ಥಳಗಳಲ್ಲಿ ಹಿಕ್ಕೆ ಹಾಕುವದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕಾಯಿಲೆ, ಅಲರ್ಜಿ ಸೇರಿ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಈ ಮಾರ್ಗದಲ್ಲಿ ಓಡಾಡುವರಿಗೆ ಹಿಕ್ಕೆಯ ಕೆಟ್ಟ ವಾಸನೆಯಿಂದ ತಲೆಸುತ್ತು ಬಂದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರು ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ಕಬೂತರ್ ದಾನ್ ಜೈನ್ ಸಂಘಟನೆ ಮುಖ್ಯಸ್ಥ ವಿನೋದ್ ಮಾತನಾಡಿ, ನಾವು ಯಾರಿಗೂ ತೊಂದರೆ ಕೊಡವುದಿಲ್ಲ, ಇಂದಿನಿಂದಲೇ ಪಾರಿವಾಳಗಳಿಗೆ ಆಹಾರ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications