ನಿಖಿಲ್ ಕುಮಾರಸ್ವಾಮಿ ಮೈಸೂರಿಂದ ಸ್ಪರ್ಧೆ? ಎಚ್‌ಡಿಕೆ ಲೆಕ್ಕಾಚಾರವೇನು?
ಮೈಸೂರು, ಮಾರ್ಚ್ 02: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಸರ್ವ ಸಿದ್ಧತೆ ನಡೆಸಿದ್ದ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಅವರು ಅಡ್ಡಗಾಲು ಹಾಕಿದ ನಂತರ ಈಗ ಮೈಸೂರಿನತ್ತ ಮುಖ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರನ್ನು ಮೈಸೂರಿನಿಂದ ಕಣಕ್ಕಿಳಿಸುವ ಉಮೇದನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದ್ದು, ಅದಕ್ಕಾಗಿ ವೇದಿಕೆ ಸಿದ್ಧಗೊಳಿಸುವ ಜವಾಬ್ದಾರಿಯನ್ನು ಸಚಿವ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರಿಗೆ ನೀಡಿದ್ದಾರೆ. ಇಬ್ಬರೂ ಮೈಸೂರು ಜಿಲ್ಲೆಯ ಶಾಸಕರಾಗಿದ್ದು ಇಬ್ಬರೂ ಕುಮಾರಸ್ವಾಮಿ ಪರಮ ನಿಷ್ಠರಾಗಿದ್ದಾರೆ.
ಈಗಾಗಲೇ ಜಿ.ಟಿ.ದೇವೇಗೌಡ ಅವರು ಮೈಸೂರಿನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುತ್ತಾರೆ ಎಂಬ ದಟ್ಟ ಸುಳಿವನ್ನು ನೀಡಿದ್ದಾರೆ. ಆದರೆ ಇದು ಮೈಸೂರಿನ ಕಾಂಗ್ರೆಸ್ ಒಳಗೆ ತರಂಗಗಳನ್ನು ಎಬ್ಬಿಸಿದೆ.
ನಿಖಿಲ್ ಕುಮಾರಸ್ವಾಮಿ ಮೈಸೂರಿನಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಕೈ ಕಾರ್ಯಕರ್ತರು ಸಿದ್ದರಾಮಯ್ಯ ಅವರನ್ನು ಎಡತಾಕಿದ್ದು, ಖಡ್ಡಾಯವಾಗಿ ಮೈಸೂರನ್ನು ಕಾಂಗ್ರೆಸ್‌ಗೆ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಮೈಸೂರು ಟಿಕೆಟ್ ಕಾಂಗ್ರೆಸ್‌ಗೆ ಎಂದಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ನಿನ್ನೆಯಷ್ಟೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಸಮಯದಲ್ಲಿ ಮೈಸೂರು-ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿ ಹರಿಡಿರುವುದು ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಮಂಡ್ಯದಲ್ಲಿ ಸುಮಲತಾ ಶಕ್ತಿ ಹೆಚ್ಚಾಗುತ್ತಿದೆ
ಮಂಡ್ಯದಲ್ಲಿ ಸುಮಲತಾ ಅವರು ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ. ಒಂದೊಮ್ಮೆ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲ್ಲುವ ಸಾಧ್ಯತೆ ಇದೆ. ಹಾಗಾಗಿ ಮಂಡ್ಯದ ಉಪಟಳ ಬೇಡವೆಂದು ಮೈಸೂರು-ಕೊಡಗು ಕ್ಷೇತ್ರದತ್ತ ಕುಮಾರಸ್ವಾಮಿ ಗಮನ ಹರಿಸಿದ್ದಾರೆ.

ಮಂಡ್ಯದಲ್ಲಿ ಕೈ ಕಾರ್ಯಕರ್ತರ ಬೆಂಬಲ ಪೂರ್ಣ ಸಿಗದು
ಮಂಡ್ಯದಲ್ಲಿ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೂ ಸಹ ಕಾಂಗ್ರೆಸ್‌ನ ಕಾರ್ಯಕರ್ತರು ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಜೊತೆಗೆ ಕೆಲವು ಕಾಂಗ್ರೆಸ್ ಮುಖಂಡರು ಸಹ ಅವರನ್ನೇ ಬೆಂಬಲಿಸುವ ಸಾಧ್ಯತೆ ಇದೆ. ಇದರ ಸುಳಿವು ಪಡೆದಿರುವ ಕುಮಾರಸ್ವಾಮಿ ಅವರು ತಮ್ಮ ಮಗನ ರಾಜಕೀಯದಲ್ಲಿ ಸ್ಥಾಪಿಸಲು ಮಂಡ್ಯದ ಬದಲು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮೈಸೂರಲ್ಲಿ ಕೈ ನಾಯಕರಿಗೆ ಬೇರೆ ದಾರಿಯಿಲ್ಲ
ಮಂಡ್ಯದಲ್ಲಾದರೆ ಸಿದ್ದರಾಮಯ್ಯ ಅವರು ಸುಮಲತಾ ಅವರಿಗೆ ಹಿಂದಾರಿಯಿಂದ ಬೆಂಬಲ ನೀಡುವ ಅಥವಾ, ಸುಮಲತಾ ವಿರುದ್ಧ ಪ್ರಚಾರ ಮಾಡದೇ ಇರುವ ಸಾಧ್ಯತೆ ಇದೆ. ಆದರೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್‌ಗೆ ಆ ರೀತಿಯ ಯಾವ ಅವಕಾಶಗಳೂ ಇಲ್ಲ. ಜೆಡಿಎಸ್‌ಗೆ ಟಿಕೆಟ್ ನೀಡಿದರೆ ಖಡ್ಡಾಯವಾಗಿ ಕೈ ಮುಖಂಡರು ಕಾರ್ಯಕರ್ತರು ಜೆಡಿಎಸ್‌ಗೆ ಬೆಂಬಲ ನೀಡಲೇ ಬೇಕಾಗುತ್ತದೆ. ಇದನ್ನೂ ಸಹ ಕುಮಾರಸ್ವಾಮಿ ಅವರು ಯೋಚಿಸಿದ್ದಾರೆ.

ಪ್ರತಾಪ್ ಸಿಂಹರ ಸೋಲಿಸುವ ಪಣ
ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಪ್ರತಾಪ್ ಸಿಂಹ ಅವರು ಗೆದ್ದಿದ್ದಾರೆ. ಆದರೆ ಅವರ ಗೆಲುವಿನ ಅಂತರ ಹೆಚ್ಚೇನು ದೊಡ್ಡದಿಲ್ಲ. ಈ ಬಾರಿ ಮೈತ್ರಿ ಆಗಿ ಚುನಾವಣೆ ಎದುರಿಸಿದಲ್ಲಿ ಪ್ರತಾಪ್ ಅವರಿಗೆ ಸೋಲುಣಿಸಲು ಸಾಧ್ಯ ಎಂಬುದು ಜೆಡಿಎಸ್-ಕಾಂಗ್ರೆಸ್ ಲೆಕ್ಕಾಚಾರ. ಸಿದ್ದರಾಮಯ್ಯ ಅವರು ಸಹ ಪ್ರತಾಪ್ ಸಿಂಹ ಅವರನ್ನು ಸೋಲಿಸಬೇಕು ಎಂದು ತುದಿಗಾಲಲ್ಲಿದ್ದು ಅವರು ನಿಖಿಲ್ ಕುಮಾರಸ್ವಾಮಿಗೆ ಪೂರ್ಣ ಬೆಂಬಲ ನೀಡುತ್ತಾರೆ ಎಂಬುದು ಕುಮಾರಸ್ವಾಮಿ ಲೆಕ್ಕಾಚಾರ.












Click it and Unblock the Notifications