ಜನವರಿಯಿಂದ ನಾಗರಹೊಳೆಯಲ್ಲಿ ಹೊಸ ಸಫಾರಿ!
ಮೈಸೂರು, ಡಿಸೆಂಬರ್ 06; ವನ್ಯಜೀವಿ ಪ್ರಿಯರ ನೆಚ್ಚಿನ ತಾಣವಾದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಹಾಗೂ ಅಂತರಸಂತೆಯಲ್ಲಿ ಸಫಾರಿ ನಡೆಸಲಾಗುತ್ತಿದೆ. ಇದೀಗ ಎಲ್ಲಾ ಅಂದುಕೊಂಡಂತೆ ನಡೆದರೆ ಜನವರಿಯಿಂದ ನಾಗರಹೊಳೆ ಬಫರ್ ಜೋನ್‌ನಲ್ಲಿ ಹೊಸ ಸಫಾರಿ ಆರಂಭಗೊಳ್ಳಲಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸುಮಾರು 200 ಚ.ಕಿ.ಮೀ. ವ್ಯಾಪ್ತಿಯ ಬಫರ್ ಜೋನ್ (ಅರಣ್ಯ ಭಾಗದ ಹೊರ ವಲಯ) ಹೊಂದಿದೆ. ಇಲ್ಲಿಯೂ ವನ್ಯಜೀವಿಗಳ ಓಡಾಟ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಅರಣ್ಯ ಇಲಾಖೆ ಬಫರ್ ಜೋನ್‌ನಲ್ಲಿ ಸಫಾರಿ ಆರಂಭಿಸಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಬಫರ್ ಜೋನ್ ಎಂದರೆ ಅರಣ್ಯ ಪಕ್ಕದ ಜಾಗ. ಸದ್ಯ ಇದನ್ನು ತೋಟಗಾರಿಕೆ, ನೀರು ಸಂಗ್ರಹ ಮಾಡಲಷ್ಟೇ ಬಳಕೆ ಮಾಡಲಾಗುತ್ತಿದೆ. ಇದನ್ನು ಕಾಡಿನ ಸರಹದ್ದಿನೊಳಗೆ ತಂದರೆ ವನ್ಯಜೀವಿ ಆವಾಸ ಸ್ಥಾನ ವಿಸ್ತರಣೆ ಮಾಡಬಹುದು. ನಾಗರಹೊಳೆಯ ಹುಣಸೂರು, ಪಿರಿಯಾಪಟ್ಟಣದ ಕೆಲ ಕಾಡುಗಳು ಅರಣ್ಯಕ್ಕೆ ಹೊಂದಿಕೊಂಡಿವೆ. ವಿರಾಜಪೇಟೆ ಬಳಿ ಆನೆಚೌಕೂರು ಸೇರಿದಂತೆ ನಾನಾ ಪ್ರದೇಶಗಳು ಸೇರಿಕೊಂಡಿವೆ.

"ಜೋನ್‌ಗೆ ಬೇಕಾದ ಸೌಲಭ್ಯ, ಕೊಠಡಿ, ಸಿಬ್ಬಂದಿ, ವಾಹನ, ಸಫಾರಿ ಮಾರ್ಗ ಮುಂತಾದವುಗಳ ಬಗ್ಗೆ ವರದಿ ತಯಾರಿಸಿ ಪಿಸಿಸಿಎಫ್‌ಗೆ ಕಳುಹಿಸಲಾಗುವುದು. ಅವರು ಪರಿಶೀಲಿಸಿ ಅನುಮತಿ ಕೊಟ್ಟರೆ ಜನವರಿಯಲ್ಲಿ ಸಫಾರಿ ಆರಂಭಿಸುವ ಚಿಂತನೆ ಇದೆ" ಎಂದು ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.
ದಕ್ಷಿಣಕ್ಕೆ ಇದು ಹೊಸತು; ಹುಲಿ ಸಂರಕ್ಷಣಾ ಯೋಜನೆಯಲ್ಲಿ ಬಫರ್ ಜೋನ್‌ನಲ್ಲಿ ಸಫಾರಿ ನಡೆಸಲು ಈಗಾಗಲೇ ಶಿಫಾರಸು ಮಾಡಲಾಗಿದೆ. ಅದನ್ನು ಜಾರಿಗೊಳಿಸಬೇಕಾದರೆ ಪಿಸಿಸಿಎಫ್ ಅನುಮತಿ ಬೇಕು. ಒಂದು ವೇಳೆ ಅನುಮತಿ ಸಿಕ್ಕರೆ ಡಿಸೆಂಬರ್‌ನಿಂದ ಕಾರ್ಯಾರಂಭವಾಗಲಿದೆ. ಜೊತೆಗೆ ರಾಜ್ಯದಲ್ಲೇ ಬಫರ್‌ಜೋನ್‌ನಲ್ಲಿ ಸಫಾರಿ ಆಗುತ್ತಿರುವ ಮೊದಲ ಅರಣ್ಯ ಪ್ರದೇಶ ನಾಗರಹೊಳೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಉತ್ತರ ಪ್ರದೇಶದ ತಡಬ ಸೇರಿದಂತೆ ಇತರ ರಾಜ್ಯಗಳಲ್ಲಿ ಬಫರ್‌ಜೋನ್‌ನಲ್ಲಿ ಸಫಾರಿನಡೆಸಲಾಗುತ್ತಿದೆ. ಆದರೆ, ದಕ್ಷಿಣ ಭಾರತದ ಮಟ್ಟಿಗೆ ಮಾತ್ರ ಇದು ಹೊಸದು.
ಹಲವು ಅನುಕೂಲ; ಸಾಮಾನ್ಯವಾಗಿ ಕಾಡಿನ ಒಳಗೆ ಕೋರ್ ಜೋನ್‌ನಲ್ಲಿ ಸಫಾರಿ ನಡೆಸುವುದು ವಾಡಿಕೆ. ಅರಣ್ಯದ ಹೊರವಲಯದ ಕಾಡಿಗೆ 'ಬಫರ್‌ಜೋನ್' ಎಂದು ಕರೆಯಲಾಗುತ್ತದೆ. ಪ್ರಾಣಿಪ್ರಿಯರು ಕಾಡನ್ನು ಪ್ರವೇಶಿಸುವ ಮಾರ್ಗದಲ್ಲೇ ಹಲವು ವನ್ಯಜೀವಿಗಳನ್ನು ವೀಕ್ಷಿಸಿರುತ್ತಾರೆ. ಹಾಗಾಗಿ ಈ ಪ್ರದೇಶದಲ್ಲಿ ಸಫಾರಿ ಮಾಡಿದರೆ ವನ್ಯಜೀವಿಗಳಿಗೆ ಸಂರಕ್ಷಣೆ ಜೊತೆಗೆ ಕಳ್ಳಬೇಟೆಗಾರರ ಮೇಲೆ ನಿಗಾ ಇಡಬಹುದು ಎಂಬ ಉದ್ದೇಶದಿಂದ ನಾಗರಹೊಳೆಯಲ್ಲಿ ಯೋಜನೆ ಯೊಂದು ಸಿದ್ಧವಾಗುತ್ತಿದ್ದು, ಇನ್ನೊಂದು ತಿಂಗಳಿನಲ್ಲಿ ಪಿಸಿಸಿಎಫ್‌ಗೆ ಪ್ರಸ್ತಾವನೆ ಕಳುಹಿಸುವ ಆಲೋಚನೆ ಅರಣ್ಯ ಇಲಾಖೆ ಹೊಂದಿದೆ.
ಹೆಚ್ಚಲಿದೆ ವಾರ್ಷಿಕ ಆದಾಯ; "ಪ್ರತಿ ವರ್ಷ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವೀರನಹೊಸಹಳ್ಳಿ ಹಾಗೂ ಆನೆಚೌಕೂರು ಎರಡೂ ಗೇಟ್ ಗಳಲ್ಲಿ ಸಫಾರಿ ನಡೆಯುತ್ತಿದ್ದು, ಪ್ರತಿ ವರ್ಷ ಸುಮಾರು 5 ಕೋಟಿ ರೂ.ಗಳಷ್ಟು ಆದಾಯ ಬರುತ್ತಿತ್ತು. ಕೋವಿಡ್ ಮೊದಲನೇ ಹಾಗೂ 2ನೇ ಅಲೆಯ ನಂತರ ಶೇ 40ರಷ್ಟು ಆದಾಯ ಕುಂಠಿತವಾಗಿದೆ. ಬಫರ್ ಜೋನ್ ಸಫಾರಿ ಆರಂಭಿಸುವುದರಿಂದ ಆದಾಯ ಹೆಚ್ಚಳವಾಗಲಿದೆ. ಜೊತೆಗೆ ಸ್ಥಳೀಯರಿಗೆ ಮತ್ತಷ್ಟು ಉದ್ಯೋಗ ನೀಡಲು ಸಹಕಾರಿಯಾಗುತ್ತದೆ" ಎಂದು ಡಿಸಿಎಫ್ ಮಹೇಶ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications