Mysuru: ವೀಳ್ಯದೆಲೆ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಹೊಸ ಭರವಸೆ
ಮೈಸೂರು, ಸೆಪ್ಟೆಂಬರ್ 30: ಪಾರಂಪರಿಕ ಬೆಳೆಯಾದ ಮೈಸೂರು ವೀಳ್ಯದೆಲೆ ಬೆಳೆಗಾರರು ಹಚ್ಚಿರುವ ಹಾಗೂ ದೇಶದಲ್ಲಿ ಅತಿಹೆಚ್ಚು ದಲಿತ ಜನಾಂಗದ ಜನ ವಾಸಿಸುತ್ತಿರುವ ಅಶೋಕಪುರಂ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಳೆದೆಲೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ಅಶೋಕಪುರಂ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕ್ಕಗರಡಿ, ದೊಡ್ಡಗರಡಿ, ಸಮುದಾಯ ಭವನ, ಆಟದ ಮೈದಾನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಇಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ತಯಾರಿಸಲು ಸಚಿವರಾದ ಮಹಾದೇವಪ್ಪ ಹಾಗೂ ಸ್ಥಳೀಯ ಮುಖಂಡರುಗಳಿಗೆ ಸೂಚಿಸಲಾಗಿದೆ ಎಂದರು.

ಇದರೊಂದಿಗೆ ಪಾರಂಪರಿಕ ಬೆಳೆಗಳಾದ ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ವೀರನಗೆರೆ ಬದನೆಕಾಯಿ ಮುಂತಾದ ಬೆಳೆಗಳನ್ನು ಅಭಿವೃದ್ದಿ ಪಡಿಸಲು ಬಜೆಟ್ ಘೋಷಣೆಯೊಂದಿಗೆ ಕ್ರಮವಹಿಸಲಾಗಿದೆ ಎಂದರು.
ಅಶೋಕಪುರಂ ಪ್ರದೇಶದಲ್ಲಿ ವಿದ್ಯಾವಂತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಂಬೇಡ್ಕರರ ಆಶಯದಂತೆ ಶಿಕ್ಷಣ ಹೋರಾಟದ ಮೂಲಕ ಮುಂದೆ ಬರಬೇಕಾಗಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ತುಳಿತಕ್ಕೊಳಗಾದವರು ಮುಖ್ಯವಾಹಿನಿಗೆ ಬರಬೇಕೆಂಬ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ 24.01 ರಷ್ಟು ಅನುದಾನವನ್ನು ಈ ವರ್ಗಗಳಿಗೆ ಮೀಸಲಿಟ್ಟಿದೆ.

ಅದರಂತೆ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 48 ಲಕ್ಷ ಕೋಟಿಗಳಾಗಿದ್ದು, ಕನಿಷ್ಟ 7 ಲಕ್ಷ ಕೋಟಿಗಳನ್ನು ಈ ಸಮುದಾಯಗಳಿಗೆ ಮೀಸಲಿಡಬೇಕು. ಆದರೆ ಹಣ ನೀಡಿರುವುದು ಕೇವಲ 60 ಸಾವಿರ ಕೋಟಿ ಇದರಿಂದ ಕೇಂದ್ರ ಸರ್ಕಾರಕ್ಕೆ ತಳ ಸಮುದಾಯಗಳ ಬಗೆಗಿರುವ ಕಾಳಜಿ ಅರ್ಥವಾಗುತ್ತದೆ ಎಂದು ಕೇಂದ್ರದ ವಿರುದ್ಧ ವ್ಯಂಗ್ಯವಾಡಿದರು.
ಸಾಮಾಜಿಕ ನ್ಯಾಯ ನೀಡಿಕೆಯಲ್ಲಿ ಅಂಬೇಡ್ಕರರ ಆಲೋಚನೆ ವಿಶಿಷ್ಠವಾದುದು. ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದವರು, ಅವಕಾಶ ವಂಚಿತರನ್ನು ಗುರುತಿಸಿದವರು ಅದರ ಫಲವಾಗಿ ಸಂವಿಧಾನದ ಮೂಲಕ ನೀಡಿದ ಸಮಾನತೆ ಬಡವನಿಗೂ ಒಂದೇ ಓಟು, ಶ್ರೀ ಮಂತನಿಗೂ ಒಂದೇ ಓಟು, ರಾಷ್ಟ್ರಪತಿಗೂ ಒಂದೇ ಓಟು,ಪೌರ ಕಾರ್ಮಿಕನಿಗೂ ಒಂದೇ ಓಟು, ಇಂತಹ ಉದಾತ್ತ ಚಿಂತನೆಗಳ ಅಂಬೇಡ್ಕರರ ಚಿಂತನೆಗಳು ಚಿರಸ್ಥಾಯಿಖಾಗಿ ಉಳಿಯಬೇಕೆಂದು ಅವರ ಸಮಗ್ರ ಸಂಪುಟಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಲಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ. ಮಹಾದೇವಪ್ಪ ಮಾತನಾಡಿ ಅಶೋಕಪುರಂ ಪ್ರದೇಶ ಬಹಳ ಜನದಟ್ಟಣೆಯಿಂದ ಕೂಡಿದ್ದು, ಸಮೀಪದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡಿ ವಿಶೇಷ ಕೌಶಲಾಭಿವೃದ್ದಿ ತರಬೇತಿ ಕಾರ್ಯಕ್ರಮ ಮಾಡುವುದು. ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಚಿಂತನೆ ಇದೆ. ಇನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಾಗಲೇ 20 ಕೋಟಿ ಖರ್ಚು ಮಾಡಿದ್ದು, ಮತ್ತೆ 19 ಕೋಟಿ ಮಂಜೂರಾಗಿದೆ ಎಂದರು.
ಸಭೆಯಲ್ಲಿ ಶಾಸಕರಾದ ಶ್ರೀವತ್ಸ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ವಿಧಾನ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಮಂಜೇಗೌಡ, ಮಾಜಿಶಾಸಕ ಸೋಮಶೇಖರ್, ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಸ್ಥಳೀಯ ಮುಖಂಡರು ಹಾಜರಿದ್ದರು.












Click it and Unblock the Notifications