ಏಪ್ರಿಲ್ 9ರಂದು ಬಂಡೀಪುರದಲ್ಲಿ ಬೊಮ್ಮನ್, ಬೆಳ್ಳಿಯನ್ನು ಭೇಟಿ ಆಗಲಿರುವ ಪ್ರಧಾನಿ ಮೋದಿ, ವಿವರ ಇಲ್ಲಿದೆ ತಿಳಿಯಿರಿ
ಮೈಸೂರು, ಏಪ್ರಿಲ್, 04: ಭಾರತಕ್ಕೆ ಪ್ರತಿಷ್ಠಿತ ಆಸ್ಕರ್ ಗರಿ ತಂದುಕೊಟ್ಟ "ಎಲಿಫೆಂಟ್ ವಿಸ್ಪರರ್ಸ್" ಡಾಕ್ಯುಮೆಂಟರಿಯಲ್ಲಿ ಅಭಿನಯಿಸಿರುವ ಬೊಮ್ಮನ್ ಹಾಗೂ ಬೆಳ್ಳಿ ಅವರನ್ನು ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಆಗಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾವುತ ದಂಪತಿಗಳನ್ನು ಭೇಟಿಯಾಗಿ ಅಭಿನಂದನೆ ತಿಳಿಸಲಿದ್ದು, ಇದ್ದಕ್ಕಾಗಿ ಮೋದಿ ಪ್ರವಾಸ ಪಟ್ಟಿಯೂ ತಯಾರಾಗಿದೆ. ಬಂಡೀಪುರ ಗಡಿ ಭಾಗದಿಂದ ಮುಧುಮಲೈ ಆನೆ ಶಿಬಿರಕ್ಕೆ 6 ಕಿಲೋ ಮೀಟರ್ ಇದೆ. ಹಾಗಾಗಿ ನರೇಂದ್ರ ಮೋದಿಯವರು ಬಂಡೀಪುರದಲ್ಲಿ ಸಾರಿ ಮುಗಿಸಿ ಮಾವುತ ದಂಪತಿಗಳನ್ನು ಭೇಟಿ ಆಗಲಿದ್ದಾರೆ. ಅಲ್ಲದೆ ಅವರೊಂದಿಗೆ ಸಂವಾದ ನಡೆಸಿ ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನೂ ತಿಳಿಸಲಿದ್ದಾರೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಹುಲಿ ಗಣತಿ ವರದಿ ಬಿಡುಗಡೆ ಕಾರ್ಯಕ್ರಮದಲ್ಲೂ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಅವರ ಅಧಿಕೃತ ಪ್ರವಾಸ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. ಆದರೂ ಬಂಡೀಪುರ ಹಾಗೂ ಮೈಸೂರಿಗೆ ಪ್ರಧಾನಿಯವರ ಭೇಟಿ ಬಹುತೇಕ ಖಚಿತವಾಗಿದೆ.
ಮಾವುತರ ಜೊತೆ ಸಂವಾದ ನಡೆಸಲಿರುವ ಪ್ರಧಾನಿ
ಏಪ್ರಿಲ್ 9ರಂದು ವಿಶೇಷ ಹೆಲಿಕಾಪ್ಟರ್ ಮೂಲಕ ಬಂಡೀಪುರಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿಯವರು ಸಾರಿ ನಡೆಸುವ ಮೂಲಕ ಗಮನ ಸೆಳೆಯಲಿದ್ದಾರೆ. ನಂತರ ರಾಂಪುರ ಆನೆ ಶಿಬಿರಕ್ಕೆ ಭೇಟಿ ಕೊಡಲಿದ್ದು, ಮಾವುತರ ಜೊತೆ ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಮೋದಿಯವರು ಬಂಡೀಪುರಕ್ಕೆ ಆಗಮನ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ಕುಮಾರ್ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯವರು ಸಕಲ ತಯಾರಿ ನಡೆಸುತ್ತಿದ್ದಾರೆ.

ಪ್ರಧಾನಿ ಅವರ ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಹಾಗೂ ಭದ್ರತಾ ಲೋಪ ಉಂಟಾಗದಂತೆ ನೋಡಿಕೊಳ್ಳುವುದು ಗೃಹ ಇಲಾಖೆಯ ಜವಾಬ್ದಾರಿಯೂ ಆಗಿರುತ್ತದೆ. ಆದ್ದರಿದ ಪ್ರಧಾನಿಯವರಿಗೆ ಬಿಗಿಭದ್ರತೆ ಕೈಗೊಳ್ಳುವ ಉದ್ದೇಶದಿಂದ ಎಡಿಜಿಪಿ ಅಲೋಕ್ ಕುಮಾರ್ ಬಂಡೀಪುರಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಏಪ್ರಿಲ್ 9 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದು, ಇದನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದು ಮಾದರಿ ನೀತಿ ಸಂಹಿತಿ ಉಲ್ಲಂಘನೆ ಅಲ್ಲವೇ ಎಂದಿದ್ದಾರೆ. ಈ ವರ್ಷ ರಾಜ್ಯಕ್ಕೆ ಪ್ರಧಾನಿಯವರ ಎಂಟನೇ ಭೇಟಿ ಇದಾಗಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ದೇಶದ ಪ್ರಧಾನಿಯಾಗಿರುವ ಅವರು ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರು ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ರಾಜ್ಯಕ್ಕೆ ಹೇಗೆ ಬರುತ್ತಾರೆ. ಚುನಾವಣಾ ಆಯೋಗವು ಭೇಟಿಗೆ ಅವಕಾಶ ನೀಡಬಾರದು. ಇಸಿ ಅನುಮತಿ ನೀಡಿದರೆ ಅದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.
ಹುಲಿ ಯೋಜನೆಯ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ಹೋಗುವ ನಿರೀಕ್ಷೆಯಿದೆ.
ಪ್ರಧಾನಿ ಮೋದಿಯವರು ಏಪ್ರಿಲ್ 9 ರಂದು ರಾಜ್ಯ ಭೇಟಿ ನೀಡುವುದು ಖಚಿತವಾಗಿದೆ. ಮೈಸೂರಿಗೆ ಆಗಮಿಸುವ ಅವರು ಬಂಡೀಪುರ ಅರಣ್ಯಕ್ಕೆ ತೆರಳಿ ಹುಲಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಆದರೆ ಈ ವೇಳೆ ಪ್ರಧಾನಿ ಮೋದಿ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಖಚಿತವಾಗಿಲ್ಲ. ಆದರೆ ಬಿಜೆಪಿ ನಾಯಕರು ಮತ್ತು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಅವರ ಭೇಟಿಗೆ ಚುನಾವಣಾ ಆಯೋಗವು ಅವಕಾಶ ನೀಡಬಾರದು. ಇದು ಮಾದರಿ ನಿತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications