ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿರುವ ಮೊದಲ ಪ್ರಧಾನಿ ಮೋದಿ!
ಮೈಸೂರು, ಜೂನ್ 20: ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ(ಇಂದು) ನಮೋ ಎನ್ನಲಿದ್ದು, ಇದು ಇತಿಹಾಸದಲ್ಲಿಯೇ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಮೊದಲ ಪ್ರಧಾನ ಮಂತ್ರಿ ಎನಿಸಿಕೊಳ್ಳಲಿದ್ದಾರೆ.
ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿಚಾರ ಈಗಾಗಲೇ ದೇಶಾದ್ಯಂತ ಗಮನಸೆಳೆದಿದೆ. ಏಕೆಂದರೆ ಮೈಸೂರು ಯೋಗದ ವಿಷಯದಲ್ಲಿ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಗಮನ ಸೆಳೆದಿದೆ. ಈಗಾಗಲೇ ಸಾವಿರಾರು ಮಂದಿ ಮೈಸೂರಿಗೆ ಯೋಗ ಕಲಿಯಲೆಂದೇ ಬರುತ್ತಿದ್ದಾರೆ. ಹೀಗಿರುವಾಗ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಾಂಸ್ಕೃತಿಕ ನಗರಕ್ಕೆ ಮತ್ತಷ್ಟು ಮೆರಗು ತರಲಿದೆ.
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಮೈಸೂರು ಪ್ರವಾಸದ ಡಿಟೈಲ್ಸ್ ಇಲ್ಲಿದೆ
ಹಾಗೆ ನೋಡಿದರೆ ಪ್ರಧಾನಿಯವರು ಮೈಸೂರು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಳ್ಳುವ ಬಗ್ಗೆ ಮೊದಲಿಗೆ ತೀರ್ಮಾನ ಮಾಡಲಾಗಿತ್ತು. ಆದರೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆಯಬೇಕು ಎನ್ನುವ ಉದ್ದೇಶದಿಂದ ಮನವಿ ಮಾಡಿದ್ದು, ಅದರಂತೆ ಇದೀಗ ಚಾಮುಂಡಿಬೆಟ್ಟಕ್ಕೆ ಮೋದಿಯವರು ಭೇಟಿ ನೀಡುತ್ತಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿರುವ ಮೊದಲ ಪ್ರಧಾನಿ
"ಸಾಮಾನ್ಯವಾಗಿ ಮೈಸೂರಿಗೆ ಆಗಮಿಸಿದವರು ಚಾಮುಂಡಿಬೆಟ್ಟಕ್ಕೆ ತೆರಳಿ ಶಕ್ತಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡದೆ ತೆರಳುವುದು ಅಪರೂಪ. ಈಗಾಗಲೇ ಹಲವು ರಾಜ್ಯ ಮತ್ತು ಹೊರ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ರಾಜ್ಯಪಾಲರು, ಕೇಂದ್ರ ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಾಮುಂಡೇಶ್ವರಿಯ ದರ್ಶನ ಪಡೆದಿರುವುದು ಮಾತ್ರವಲ್ಲದೆ ಹರಕೆಯನ್ನು ಸಲ್ಲಿಸಿ ಹೋಗಿದ್ದಾರೆ. ಆದರೆ ಇದುವರೆಗೆ ಪ್ರಧಾನ ಮಂತ್ರಿಗಳು ತಮ್ಮ ಅಧಿಕಾರದ ಅವಧಿಯಲ್ಲಿ ಇಲ್ಲಿಗೆ ಆಗಮಿಸಿಲ್ಲ ಎನ್ನಲಾಗಿದ್ದು, ಮೋದಿಯವರೇ ಪ್ರಥಮವಾಗಿ ಭೇಟಿ ನೀಡುತ್ತಿರುವ ಪ್ರಧಾನಿ," ಎಂಬುದಾಗಿ ದೇಗುಲದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.
ಬೆಂಗಳೂರಿನ ಐಐಎಸ್ಸಿಯಲ್ಲಿ ಮಿದುಳು ಸಂಶೋಧನಾ ಕೇಂದ್ರ ಉದ್ಘಾಟಿಸಿದ ಮೋದಿ

ದೇವಿ ದರ್ಶನಕ್ಕೆ ಭಕ್ತಾಧಿಗಳಿಗೆ ನಿಷೇಧ
ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ ಭದ್ರತಾ ಹಿತದೃಷ್ಟಿಯಿಂದ ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೆ ಚಾಮುಂಡಿಬೆಟ್ಟ ಹಾಗೂ ಶ್ರೀಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಹೀಗಾಗಿ ಚಾಮುಂಡಿಬೆಟ್ಟಕ್ಕೆ ರಸ್ತೆ ಮಾರ್ಗ ಹಾಗೂ ಮೆಟ್ಟಿಲು ಮಾರ್ಗದ ಮೂಲಕ ಯಾರೂ ಕೂಡ ಚಾಮುಂಡಿಬೆಟ್ಟಕ್ಕೆ ತೆರಳದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದೆಲ್ಲದರ ನಡುವೆ ಚಾಮುಂಡಿಬೆಟ್ಟದ ನಿವಾಸಿಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳಬೇಕಾದರೆ ವಾಸಸ್ಥಳದ ಗುರುತಿನ ಚೀಟಿ ಬಳಸುವುದು ಕಡ್ಡಾಯವಾಗಿದೆ.

ಸಾರ್ವಜನಿಕರ ವಾಹನಗಳ ನಿಷೇಧ
ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ, ಇತರೆ ಸಾರ್ವಜನಿಕ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ ಮಧ್ಯಾಹ್ನ 12ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಭಕ್ತಾಧಿಗಳಿಗೆ ಚಾಮುಂಡಿಬೆಟ್ಟ ಹಾಗೂ ಶ್ರೀಚಾಮುಂಡೇಶ್ವರಿ ಅಮ್ಮನವರದೇ ಸ್ಥಾನಕ್ಕೆ ತೆರಳಲು ಅವಕಾಶ ಇರುವುದಿಲ್ಲ.
ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ವಿಶೇಷ ಭದ್ರತಾ ಪಡೆಯವರು ಪರಿಶೀಲನೆ ಮಾಡಿದ್ದು, ಸಮಗ್ರ ಕ್ರಮಗಳನ್ನು ಕೈಗೊಂಡಿದ್ದಾರೆ. ಜತೆಗೆ ಚಾಮುಂಡಿಬೆಟ್ಟದಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗಿದ್ದು, ಸಿಂಗಾರಗೊಂಡು ಕಂಗೊಳಿಸುತ್ತಿದೆ.

ದಸರಾದಂತೆ ದೀಪಾಲಂಕಾರ
ಈಗಾಗಲೆ ಪ್ರಧಾನಿ ಮೋದಿ ಭೇಟಿ ಪ್ರಯುಕ್ತ ಮೈಸೂರಿನ ಹಲವು ರಸ್ತೆಗಳಿಗೆ ಡಾಂಬರಿಕರಣ ಮಾಡಲಾಗಿದೆ. ಸ್ವಚ್ಛತಾಕಾರ್ಯವನ್ನು ನಿರ್ವಹಿಸಲಾಗಿದೆ. ಇದರ ಜೊತೆಗೆ ದಸರಾ ವೇಳೆ ದೀಪಾಲಂಕರ ಮಾಡಲಾಗುತ್ತಿದೆ. ಪ್ರಧಾನಮಂತ್ರಿಗಳು ಭೇಟಿ ನೀಡುವ ಅರಮನೆ, ಅವರು ಸಂಚರಿಸುವ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ.