ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಭೇಟಿ: ಸಂಚಾರ ಮಾರ್ಗಗಳ ಬದಲಾವಣೆ, ಮಾಹಿತಿ ಇಲ್ಲಿದೆ
ಮೈಸೂರು, ಏಪ್ರಿಲ್, 09: ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿದ್ದು, ಅವರು ಭಾನುವಾರ ಸಂಚರಿಸುವ ಮಾರ್ಗಗಳ ಬದಲಾವಣೆ ಮಾಡಲಾಗಿದೆ. ಅಲ್ಲದೇ ಮೋದಿ ವಾಸ್ತವ್ಯ ಹೂಡಿರುವ ಹೊಟೇಲ್ ಸೇರಿದಂತೆ ಸಂಚರಿಸುವ ಮಾರ್ಗ ಮತ್ತು ಭಾಗವಹಿಸುವ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಹೆಜ್ಜೆ ಹೆಜ್ಜೆಗೂ ಖಾಕಿ ಪಡೆ ಕಟ್ಟೆಚ್ಚರವಹಿಸಿದೆ.
ಭಾನುವಾರ (ಏಪ್ರಿಲ್ 09) ಮಧ್ಯಾಹ್ನದವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿಯೇ ಇರುವುದರಿಂದ ಅವರು ಸಂಚರಿಸುವ ಮಾರ್ಗ ಮತ್ತು ಕಾರ್ಯಕ್ರಮ ನಡೆಯುವ ಸ್ಥಳ ವ್ಯಾಪ್ತಿಯಲ್ಲಿ ಬಿಗಿ ಭದ್ರತೆ ದೃಷ್ಟಿಯಿಂದ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ನಗರದ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಸಂಚರಿಸದೇ ಮನೆಯಲ್ಲಿಯೇ ಇದ್ದರೆ ಉತ್ತಮ. ತುರ್ತು ಕಾರ್ಯವಿದ್ದರೆ ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ.

ಬೆಳಗ್ಗೆ 3ರಿಂದ 7ರವರೆಗೆ ಸಂಚಾರ ನಿರ್ಬಂಧ
ನಂಜನಗೂಡು ರಿಂಗ್ ರಸ್ತೆ ಜಂಕ್ಷನ್‌ನಿಂದ ಎಲೆತೋಟ ಜಂಕ್ಷನ್, ರಾಜ ಹಂಸ ಜಂಕ್ಷನ್- ಗನ್ ಹೌಸ್ ಜಂಕ್ಷನ್‌ವರೆಗೆ ಮತ್ತು ರಾಜ ಹಂಸ ಜಂಕ್ಷನ್‌ನಿಂದ ಮಹಾರಾಣ ಪ್ರತಾಪ ಸಿಂಗ ವೃತ್ತದವರೆಗೆ ವಾಹನಗಳ ಸಂಚಾರವನನ್ನು ನಿರ್ಬಂಧಿಸಲಾಗಿದೆ. ನಂಜನಗೂಡು ರಸ್ತೆಯ ಮೂಲಕ ಸಂಚರಿಸುವ ವಾಹನಗಳು ಕಡಕೊಳ-ದಡದಹಳ್ಳಿ-ರಮಾಬಾಯಿ ನಗರ-ಶ್ರೀರಾಂಪುರ ರಿಂಗ್ ರಸ್ತೆ ಮೂಲಕ ಮುಂದುವರೆಯುವುದು.
ತಿ.ನರಸೀಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಬಲ ತಿರುವು ಪಡೆದು ವಾಯು ವಿಹಾರ ಮಾರ್ಗದಲ್ಲಿ ಸಂಚರಿಸುವುದು. ಅರೆಸೇನಾ ಪಡೆಯೊಂದಿಗೆ ನಗರ ಸಶಸ ಮೀಸಲು ಪಡೆ, ಕಮಾಂಡೋ ಪಡೆಯೊಂದಿಗೆ ಸಿವಿಲ್ ಮತ್ತು ಸಂಚಾರ ಪೊಲೀಸರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಆರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಶನಿವಾರ (ಏಪ್ರಿಲ್ 08) ರಾತ್ರಿಯೇ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಂಜನಗೂಡು ರಸ್ತೆ ಮಾರ್ಗದಲ್ಲಿ ಎಂಜಿ ರಸ್ತೆಯ ರ್ಯಾಡಿಸನ್ ಬ್ಲೂ ಹೋಟೆಲ್ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಿದರು.
ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ನಿರ್ಬಂಧ
1. ಹುಣಸೂರು ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ವೃತ್ತದಿಂದ ಕಾರ್ಯಪ್ಪ ವೃತ್ತದವರೆಗೆ ನಿರ್ಬಂಧ.
2. ಕಾರ್ಯಪ್ಪ ವೃತ್ತದಿಂದ ರಾಮಸ್ವಾಮಿ ವೃತ್ತದವರೆಗೆ ನಿರ್ಬಂಧ
3. ಕೆ.ಆರ್‌ಬಿ ರಸ್ತೆಯಲ್ಲಿ ಡಿ.ಸಿ.ಕಚೇರಿ ಆರ್ಚ್ ಗೇಟ್ ಜಂಕ್ಷನ್‌ನಿಂದ ಏಕಲವ್ಯ ವೃತ್ತದವರೆಗೆ ನಿರ್ಬಂಧ
4. ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗೆ ನಿರ್ಬಂಧ.

ಬದಲಿ ಸಂಚಾರ ಮಾರ್ಗಗಳ ವಿವರ
ಹುಣಸೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ವಾಜಪೇಯಿ ಜಂಕ್ಷನ್ ಬಳಿ ಬಲ ಅಥವಾ ಎಡ ತಿರುವು ಪಡೆದು ರಿಂಗ್ ರಸ್ತೆಯಲ್ಲಿ ಮುಂದುವರೆಯುವುದು. ಕೆ.ಆರ್.ಎಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಡಾ.ಪದ್ಮ ವೃತ್ತದಲ್ಲಿ ಬಲ ತಿರುವು ಪಡೆದು ಕಾಂತರಾಜ ಅರಸ್ ರಸ್ತೆಯಲ್ಲಿ ಸಾಗಬೇಕಾಗುತ್ತದೆ.
ರೆಸಾರ್ಟ್ ಮತ್ತು ಲಾಡ್ಜ್‌ಗಳು ಬಂದ್
ಬಂಡೀಪುರ ಹುಲಿ ಸಂರಕ್ಷಿತ ಯೋಜನೆಗೆ 50 ವರ್ಷ ತುಂಬಿರುವ ಕಾರಣ ಏಪ್ರಿಲ್ 9 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಫಾರಿ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಆದೇಶ ಹೊರಡಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಸೂಕ್ತ ಬಿಗಿ ಭದ್ರತೆ ಹಾಗೂ ಪೂರ್ವ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಏಪ್ರಿಲ್ 6ರಿಂದ ಏಪ್ರಿಲ್ 9 ರವರೆಗೆ ಸಾರ್ವಜನಿಕರ ವನ್ಯಜೀವಿ ಸಫಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಮೇಶ್ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಏಪ್ರಿಲ್ 6ರಿಂದ ಬಂಡೀಪುರ ವ್ಯಾಪ್ತಿಯ ಎಲ್ಲಾ ಹೋಂಸ್ಟೇ, ರೆಸಾರ್ಟ್ ಮತ್ತು ಲಾಡ್ಜ್‌ಗಳು ಬಂದ್ ಆಗಲಿವೆ.












Click it and Unblock the Notifications