Get Updates
Get notified of breaking news, exclusive insights, and must-see stories!

Nagarahole: ನಾಗರಹೊಳೆಯಲ್ಲಿ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸಜ್ಜು

ಮೈಸೂರು, ಫೆಬ್ರವರಿ 04: ಪ್ರತಿ ವರ್ಷದಂತೆ ಈ ಬಾರಿಯೂ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಅಗ್ನಿರೇಖೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಕಾಡ್ಗಿಚ್ಚು ತಡೆಗೆ ಬೇಕಾದ ಸಿದ್ಧತೆಗಳನ್ನು ಅರಣ್ಯ ಇಲಾಖೆ ಮಾಡಿಕೊಳ್ಳುತ್ತಿದೆ. ಏಕೆಂದರೆ ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಝಳಕ್ಕೆ ಹಸಿರಾಗಿದ್ದ ಅರಣ್ಯಗಳು ನಿಧಾನವಾಗಿ ಸೊರಗುತ್ತಿವೆ. ಕುರುಚಲು ಕಾಡು, ಹುಲ್ಲುಗಳು ಒಣಗುತ್ತಿದ್ದು ಮುಂದಿನ ದಿನಗಳಲ್ಲಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಅರಣ್ಯ ಇಲಾಖೆಗೆ ಸವಾಲ್ ಆಗಿದೆ. ಹೀಗಾಗಿ ಬೆಂಕಿರೇಖೆ ನಿರ್ಮಾಣದ ಮೂಲಕ ಕಾಡ್ಗಿಚ್ಚು ತಡೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬೇಸಿಗೆ ಬರುತ್ತಿದ್ದಂತೆಯೆ ಅರಣ್ಯ ಇಲಾಖೆ ಬೆಂಕಿರೇಖೆಗಳನ್ನು ನಿರ್ಮಾಣ ಮಾಡುವುದು ಮಾಮೂಲಿಯಾಗಿದೆ. ಆ ಮೂಲಕ ಕಾಡ್ಗಿಚ್ಚಿನಿಂದ ಅರಣ್ಯವನ್ನು ಕಾಪಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಕಾಡ್ಗಿಚ್ಚು ಬಗ್ಗೆ ತೀವ್ರ ನಿಗಾವಹಿಸುತ್ತಿರುವ ಕಾರಣದಿಂದಾಗಿ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸಿಕೊಳ್ಳುವುದು ಸಾಧ್ಯವಾಗುತ್ತಿದ್ದು, ಕಾಡ್ಗಿಚ್ಚಿನ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ ಅರಣ್ಯ ನಾಶ ಮತ್ತು ಪ್ರಾಣಿ, ಪಕ್ಷಿ, ಜೀವಜಂತುಗಳ ಪ್ರಾಣ ಹಾನಿಯೂ ತಪ್ಪಿದಂತಾಗಿದೆ.

Nagarahole Forest Department Prepares for Fire Prevention Measures

ಈ ಬಾರಿ ಡಿಸೆಂಬರ್ ತನಕವೂ ಮಳೆ ಸುರಿದಿತ್ತು. ಹೀಗಾಗಿ ಈಗಲೂ ಅರಣ್ಯ ಹಸಿರಾಗಿದೆ. ಜತೆಗೆ ಮಳೆಯಿಂದಾಗಿ ನೀರಿನಾಶ್ರಿತ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಕೆರೆಕಟ್ಟೆಗಳಲ್ಲಿ ನೀರಿದೆ. ಹಾಗೆಯೇ ಅರಣ್ಯದ ನಡುವೆ ಹರಿಯುವ ನದಿತೊರೆಗಳಲ್ಲಿಯೂ ನೀರು ಕಾಣಿಸುತ್ತಿದೆ. ಇದರಿಂದ ಪ್ರಾಣಿಪಕ್ಷಿಗಳು ನೆಮ್ಮದಿಯಾಗಿರುವುದು ಗೋಚರಿಸುತ್ತಿದೆ. ಆದರೆ ಬೇಸಿಗೆಯ ಪ್ರಖರತೆ ಹೆಚ್ಚಾದಂತೆಯೇ ನೀರು ಆವಿಯಾಗುವುದಲ್ಲದೆ, ಗಿಡಮರಗಳು ಎಲೆಯುದುರಿಸಿ ಬೋಳಾಗುವ ಸಾಧ್ಯತೆಯಿದೆ. ಜೊತೆಗೆ ಒಣಗಿದ ಕುರುಚಲು ಕಾಡನ್ನು ರಕ್ಷಿಸುವುದು ಕಷ್ಟವಾಗುತ್ತದೆ. ಇಲ್ಲಿ ಸ್ವಲ್ಪ ಎಡವಟ್ಟಾದರೂ ಇಡೀ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆಯಿರುತ್ತದೆ.

ಎಂಟು ವಲಯಗಳಲ್ಲಿ ಬೆಂಕಿರೇಖೆ ನಿರ್ಮಾಣ

ಕೆಲವು ವರ್ಷಗಳ ಹಿಂದೆ ಆನೆಚೌಕೂರು ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿಗೆ ಅರಣ್ಯ ನಾಶವಾಗಿದ್ದು ಬಹುತೇಕ ಒಣಗಿ ನಿಂತಿರುವ ಮರಗಳು ಇವತ್ತಿಗೂ ಸಾಕ್ಷಿಯಾಗಿವೆ. ಬೋಳಾಗಿದ್ದ ಅರಣ್ಯ ಬಿದಿರು ಮೆಳೆಗಳಿಂದ ಇವತ್ತು ಹಸಿರಾಗಿ ಕಾಣುವಂತಾಗಿದೆ. ಸದ್ಯ ಅರಣ್ಯ ಸಂಪತ್ತಿನ ಜತೆಗೆ ಜೀವ ಸಂಕುಲವನ್ನು ಕಾಪಾಡುವ ಹೊಣೆ ಅರಣ್ಯ ಇಲಾಖೆಯ ಮೇಲೆ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೈಯೆಲ್ಲ ಕಣ್ಣಾಗಿ ಇಡೀ ಅರಣ್ಯವನ್ನು ಕಾಯುತ್ತಿದ್ದಾರೆ. ಕಾಡ್ಗಿಚ್ಚು ತಡೆಯುವ ಮೊದಲ ಹಂತವಾಗಿ ಬೆಂಕಿರೇಖೆಗಳನ್ನು ನಿರ್ಮಿಸಲಾಗುತ್ತದೆ.

Nagarahole Forest Department Prepares for Fire Prevention Measures

ಸದ್ಯ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸುಮಾರು ಎರಡು ಸಾವಿರದ ಐನೂರ ನಲವತ್ತೊಂಬತ್ತು ಕಿ.ಮೀ. ವ್ಯಾಪ್ತಿಯಲ್ಲಿ ಬೆಂಕಿರೇಖೆಗಳನ್ನು ನಿರ್ಮಿಸಲಾಗುತ್ತಿದೆ. 845 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿರುವ ನಾಗರಹೊಳೆ ಅಭಯಾರಣ್ಯವನ್ನು ಎಂಟು ವಲಯಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯಗಳಲ್ಲಿ ಬೆಂಕಿರೇಖೆಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಈ ಪೈಕಿ ಹುಣಸೂರು ವಲಯದಲ್ಲಿ ಮುನ್ನೂರು, ವೀರನಹೊಸಹಳ್ಳಿ ಇನ್ನೂರಇಪ್ಪತ್ತೆರಡು, ಆನೆಚೌಕೂರು ನಾನೂರು ಅರುವತ್ತೆರಡು, ಡಿ.ಬಿ.ಕುಪ್ಪೆ ನಾನೂರ ಅರುವತ್ತೇಳು, ಅಂತರಸಂತೆ ಇನ್ನೂರ ಮೂವತ್ತೆಂಟು, ಮೇಟಿಕುಪ್ಪೆ ಇನ್ನೂರಮೂವತ್ತನಾಲ್ಕು, ಕಲ್ಲಹಳ್ಳ ಇನ್ನೂರ ಎಂಬತ್ತೆಂಟು, ನಾಗರಹೊಳೆ ಮುನ್ನೂರ ಹದಿನಾರು ಕಿಮೀ ನಷ್ಟು ಬೆಂಕಿ ರೇಖೆ ನಿರ್ಮಾಣವಾಗುತ್ತಿದೆ.

Nagarahole Forest Department Prepares for Fire Prevention Measures

ಅರಣ್ಯ ರಕ್ಷಣೆಗೆ ಸರ್ವ ಸನ್ನದ್ಧವಾದ ಇಲಾಖೆ

ಈ ಬೆಂಕಿರೇಖೆಗಳನ್ನು ಸಾರ್ವಜನಿಕರು ಓಡಾಡುವ ಅರಣ್ಯದ ಅಂಚಿನಲ್ಲಿ ನಿರ್ಮಿಸಲಾಗುತ್ತಿದೆ. ಅರಣ್ಯದ ನಡುವೆ ವಾಹನಗಳು ಹಾದು ಹೋಗುವುದರಿಂದ ಕೆಲವೊಮ್ಮೆ ಹಲವು ಕಾರಣಗಳಿಗೆ ಜನರ ನಿರ್ಲಕ್ಷ್ಯಕ್ಕೆ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರಲಿದೆ. ಹೀಗಾಗಿ ಇಂತಹ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸುವುದರ ಜತೆಗೆ ಡ್ರೋಣ್ ಸೇರಿದಂತೆ ವಿವಿಧ ತಂತ್ರಜ್ಞಾನ ಬಳಸಿ ಕಾಡ್ಗಿಚ್ಚು ತಡೆಗೆ ನಿಗಾ ವಹಿಸಲಾಗುತ್ತಿದೆ. 2014 ರಿಂದ 2019ರವರೆಗೆ ಹೆಚ್ಚು ಕಾಡ್ಗಿಚ್ಚು ಪ್ರಕರಣ ನಡೆದಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ತಹಬದಿಗೆ ತರಲಾಗಿದೆ. ಇದರಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮವಿರುವುದು ಎದ್ದು ಕಾಣಿಸುತ್ತಿದೆ.

ಮುಂದಿನ ದಿನಗಳು ಬೇಸಿಗೆಯ ದಿನಗಳಾಗಿರುವುದರಿಂದ ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸಬೇಕಾದರೆ ಹದ್ದಿನ ಕಣ್ಣಿಟ್ಟು ಕಾಯುವುದು ಅನಿವಾರ್ಯವಾಗಿದೆ. ಹೀಗಾಗಿ ಹಲವು ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲೇ ಬೇಕಾಗಿದೆ. ಕಾವಲು ಕಾಯಲು ಸುಮಾರು ನಾನೂರಕ್ಕೂ ಹೆಚ್ಚು ಹಂಗಾಮಿ ಸಿಬ್ಬಂದಿಗಳ ನೇಮಕ, ಜತೆಗೆ ಎಂಟು ವಲಯಗಳಲ್ಲಿ ವಾಚ್ ಟವರ್ ಮತ್ತು ಅಟ್ಟಣಿಗೆಗಳ ನಿರ್ಮಾಣ ಮಾಡಿ ಹಗಲು ರಾತ್ರಿ ಎನ್ನದೆ ಕಾವಲು ಕಾಯಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಬೇಸಿಗೆಯಲ್ಲಿ ಸಂಭವಿಸುವ ಕಾಡ್ಗಿಚ್ಚಿನಿಂದ ನಾಗರಹೊಳೆ ಅರಣ್ಯವನ್ನು ರಕ್ಷಿಸಲು ಅರಣ್ಯ ಇಲಾಖೆ ಸನ್ನದ್ಧವಾಗುತ್ತಿರುವುದು ಎದ್ದು ಕಾಣಿಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+