Chamundeshwari Vardhanti: ಚಿನ್ನದ ಪಲ್ಲಕ್ಕಿಯಲ್ಲಿ ತಾಯಿ ಚಾಮುಂಡಿಯ ಮೆರವಣಿಗೆ, ಭಕ್ತರಿಂದ ಉಘೆ.. ಉಘೆ.. ಜೈಂಕಾರ
ಮೈಸೂರು, ಜುಲೈ, 10: ತಾಯಿ ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿದ್ದು, ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ತಾಯಿ ಚಾಮುಂಡೇಶ್ವರಿ ದೇವಿಯ ಜನ್ಮದಿನವನ್ನು ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಎಂದು ಕರೆಯಲಾಗುತ್ತದೆ. ಇಡೀ ಮೈಸೂರು ನಗರದಲ್ಲಿ ತಾಯಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ನಗರದ ವಿವಿಧೆಡೆ ತಾಯಿ ಹೆಸರಲ್ಲಿ ಅನ್ನ ಸಂತರ್ಪಣೆಯನ್ನು ಮಾಡಲಾಗಿದೆ. ಇನ್ನು ತಾಯಿ ಆವಾಸಸ್ಥಾನದ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ, ಹವನ ಹಾಗೂ ಅಲಂಕಾರ ಮಾಡಲಾಗಿರುತ್ತದೆ. ಜೊತೆಗೆ ತಾಯಿಯನ್ನು ಚಿನ್ನದ ಪಲ್ಲಕ್ಕಿ ಮೇಲೆ ಹೊತ್ತು ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ.

ಮೈಸೂರು ಅಭಿವೃದ್ದಿಗೆ ಯದುವಂಶದ ಕೊಡುಗೆ ಅಪಾರವಾಗಿದೆ. 1820ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ದೇವಿಯ ವಿಗ್ರಹವನ್ನು ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ ದಿನದ ಸ್ಮರಣಾರ್ಥವಾಗಿ ಆಷಾಢದಲ್ಲಿ ಮಂಗಳಕರವಾದ ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ವರ್ಧಂತಿಯನ್ನು ಆಚರಿಸಲಾಗಿದೆ. ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ, ಮಂಗಳಾರತಿಯನ್ನೂ ಮಾಡಲಾಗಿದೆ. ಹೂವು, ಹಣ್ಣುಗಳಿಂದ ವಿಶೇಷವಾಗಿ ಅಲಂಕೃತಗೊಂಡ ದೇವಿಯು ಗರ್ಭಗುಡಿಯಿಂದ ಭಕ್ತರಿಗೆ ನೇರ ದರ್ಶನವನ್ನು ನೀಡಿದ್ದಾಳೆ. ಹಾಗೆಯೇ ನಂತರ ಚಿನ್ನದ ಪಲ್ಲಕ್ಕಿದಲ್ಲಿ ದೇವಿಯನ್ನು ಮೆರವಣಿಗೆ ಮಾಡಲಾಗಿದೆ.
ಯದುವೀರ್ ದಂಪತಿಯಿಂದ ಪೂಜೆ
ಚಾಮುಂಡಿ ಬೆಟ್ಟದಲ್ಲಿಂದು ವಿಶೇಷ ಪೂಜಾ ಕೈಂಕರ್ಯ ನೆರವೇರಿದ್ದು, ಸಾರ್ವಜನಿಕರಿಗೆ ಬೆಳಗ್ಗೆ 9 ಗಂಟೆ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ದರ್ಶನಕ್ಕೆ ಭಕ್ತ ಸಮೂಹವೇ ಆಗಮಿಸಿದ್ದು, ಬೆಳಗ್ಗೆ 10 ಗಂಟೆಗೆ ಬಳಿಕ ಪಲ್ಲಕ್ಕಿ ಉತ್ಸವ ಜರುಗಿದೆ. ಚಾಮುಂಡಿ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ದಂಪತಿ ಆಗಮಿಸಿದ್ದು, ಪಲ್ಲಕ್ಕಿ ಉತ್ಸವಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು.
ಬೆಳಗಿನ ಜಾವ 4:30ರಿಂದ ಅಭ್ಯುಂಜನ ಸ್ನಾನ, ಪಂಚಾಮೃತ ಅಭಿಷೇಕ ನಡೆದಿದೆ. 9:30ಕ್ಕೆ ಮಹಾ ಮಂಗಳಾರತಿ, 10:30 ಕ್ಕೆ ರಾಜವಂಶಸ್ಥರು ಚಿನ್ನದ ಪಲ್ಲಕ್ಕಿಗೆ ಚಾಲನೆ ಕೊಟ್ಟಿದ್ದಾರೆ. ಇನ್ನು ಸಂಜೆ 6:30ರಿದ 7:30ರವರೆಗೆ ಅಭಿಷೇಕ ಇರುತ್ತದೆ. 8:30ಕ್ಕೆ ಮಹಾರಾಜರ ದರ್ಬಾರ್ ಉತ್ಸವ ಇರುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿಯಾಗಿದೆ ಎಂದು ಪ್ರಧಾನ ಅರ್ಚಕ ಶಶಿ ಶೇಖರ್ ದೀಕ್ಷಿತ್ ಹೇಳಿದರು.












Click it and Unblock the Notifications