Mysuru yuva dasara 2023: ಈ ಬಾರಿ ಯುವ ದಸರಾಗೆ ಇವರೇ ನೋಡಿ ವಿಶೇಷ ಆಹ್ವಾನಿತರು, ದಿನಾಂಕ, ಕಾರ್ಯಕ್ರಮಗಳ ವಿವರ ತಿಳಿಯಿರಿ
ಮೈಸೂರು, ಅಕ್ಟೋಬರ್, 04: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ 'ಯುವ ಸಂಭ್ರಮ' ಅಕ್ಟೋಬರ್ 6ರಿಂದ 13ರವರೆಗೆ 8 ದಿನಗಳ ಕಾಲ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ತಾರಾ ದಂಪತಿಯಾದ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಯುವ ಸಂಭ್ರಮ ಉಪ ಸಮಿತಿ ಉಪವಿಶೇಷಾಧಿಕಾರಿ ಸೀಮಾ ಲಾಟ್ಕರ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಂಭ್ರಮದಲ್ಲಿ ನಿತ್ಯ 20 ತಂಡಗಳು ಪ್ರದರ್ಶನ ನೀಡಲಿದ್ದು, ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಆಯ್ಕೆ ಮಾಡಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಲಾವಿದರನ್ನು ಗೌರವಿಸುವುದರ ಜೊತೆಗೆ ಪ್ರಯಾಣ ಭತ್ಯೆ, ವಸ ವಿನ್ಯಾಸದ ಖರ್ಚುವೆಚ್ಚ ನೀಡಲಾಗುತ್ತದೆ. ದೂರದಿಂದ ಬಂದವರಿಗೆ ಮಾತ್ರ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 6ರಂದು ಸಂಜೆ 5ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಯುವಸಂಭ್ರಮ ಕಾರ್ಯಕ್ರಮ ಉದ್ಘಾಟಿಸುವರು. ವಿಶೇಷ ಆಹ್ವಾನಿತರಾಗಿ ತಾರಾ, ದಂಪತಿಯಾದ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಭಾಗವಹಿಸಲಿದ್ದಾರೆ. ಸಚಿವರಾದ ಕೆ.ವೆಂಕಟೇಶ್, ಶಿವರಾಜ್ ಎಸ್. ತಂಗಡಗಿ, ಶಾಸಕ ಕೆ. ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು. ಮೇಯರ್ ಶಿವಕುಮಾರ್, ಸಂಸದರಾದ ಪ್ರತಾಪಸಿಂಹ, ಈ ವೇಳೆ ವಿ.ಶ್ರೀನಿವಾಸ್ ಪ್ರಸಾದ್, ಸುಮಲತಾ ಅಂಬರೀಶ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
400ಕ್ಕೂ ಹೆಚ್ಚು ಕಾಲೇಜು ತಂಡಗಳು ಭಾಗಿ
ಈ ಬಾರಿಯ ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಮತ್ತು ರಾಜ್ಯದ ಇತರೆ ವಿವಿಗಳ ಕಾಲೇಜುಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿದ್ದು, ಮೈಸೂರು ಭಾಗದಲ್ಲೇ 250 ಕಾಲೇಜುಗಳು ಭಾಗವಹಿಸಲಿವೆ. ಪ್ರತಿದಿನ 20 ತಂಡಗಳು ಪ್ರದರ್ಶನ ನೀಡಲಿದ್ದು, ಪ್ರತಿ ತಂಡಕ್ಕೆ 5 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ ಎಂದರು.

ಪ್ರತಿ ತಂಡದಲ್ಲಿ 30 ಕಲಾವಿದರಿಗೆ ಅವಕಾಶ ನೀಡಲಾಗಿದೆ. 8 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರತಿ ದಿನ 50 ಕಾಲೇಜುಗಳ ತಂಡ ಪ್ರದರ್ಶನ ನೀಡಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷೆ ವಿ.ಆರ್.ಶೈಲಜಾ, ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ಡಾ.ಆರ್.ನಿಂಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಏನೆಲ್ಲಾ ವಿಶೇಷತೆ?
1. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳು ಯುವ ದಸರೆಗೆ ಆಯ್ಕೆ
2. ಪ್ರತಿ ದಿನ ಸಂಜೆ 5.30ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ
3. ನಿತ್ಯ 20 ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ
4. 8 ದಿನಗಳಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ
5. 20 ವಸ್ತು ವಿಷಯಗಳ ಆಶಯ, ಪ್ರತಿ ತಂಡದಲ್ಲಿ 30 ಕಲಾವಿದರಿಗೆ ಅವಕಾಶ












Click it and Unblock the Notifications