ಮೈಸೂರು ಗ್ಯಾಸ್ ಸೋರಿಕೆ ದುರಂತ: ಒಂದೇ ಕುಟುಂಬದ ನಾಲ್ವರು ಸಾವು; ₹3 ಲಕ್ಷ ಪರಿಹಾರ ಘೋಷಣೆ
ಮೈಸೂರು: ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಕಲುಷಿತ ನೀರು ಕುಡಿದು ಯುವಕನೊಬ್ಬ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ಗ್ಯಾಸ್ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೈಸೂರಿನ ಯರಗನಹಳ್ಳಿಯ ನಿವಾಸಿ ಕುಮಾರಸ್ವಾಮಿ (45), ಅವರ ಪತ್ನಿ ಮಂಜುಳ (39), ಮಕ್ಕಳಾದ ಅರ್ಚನಾ (19), ಸ್ವಾತಿ (17) ಮೃತರು. ಚಿಕ್ಕಮಗಳೂರಿನ ಕುಮಾರಸ್ವಾಮಿ ಕಳೆದ ಮೂವತ್ತು ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದು, ಗ್ಯಾಸ್ ಬಳಸಿ ಲಾಂಡ್ರಿಯಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ದುರಂತ ಘಟನೆ
ಕುಮಾರಸ್ವಾಮಿ ಕುಟುಂಬದವರು ಇತ್ತೀಚಿಗೆ ಚಿಕ್ಕಮಗಳೂರಿಗೆ ತೆರಳಿ ಭಾನುವಾರ ಹಿಂದಿರುಗಿದ್ದರು. ಆದರೆ, ಮಂಗಳವಾರ ನೆರೆಹೊರೆಯವರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಸಂಬಂಧಿಕರು ಕರೆ ಮಾಡಿದರೂ ಯಾರೂ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸಂಬಂಧಿಕರು ಮನೆಗೆ ಬಂದು ಕಿಟಕಿಯಲ್ಲಿ ನೋಡಿದಾಗ ನಾಲ್ವರು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಅನಿಲ ಸೋರಿಕೆಯಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ರಮೇಶ್ ಅವರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ, ಎಫ್‌ಎಸ್‌ಐಎಲ್ ತಂಡ ಬಂದು ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ಮೂರು ಸಿಲಿಂಡರ್ ಇದ್ದು, ಒಂದು ಸಿಲಿಂಡರ್‌ನಲ್ಲಿ ಗ್ಯಾಸ್ ಲೀಕ್ ಆಗಿತ್ತು. ನಾಲ್ವರ ಮೃತದೇಹಗಳನ್ನೂ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
ಮೃತ ಕುಮಾರ ಸ್ವಾಮಿ ಅವರ ಸೋದರಿ ಮಂಜುಳಾ ನೀಡಿದ ದೂರಿನ ಮೇರೆಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ ಸರಕಾರದಿಂದ ತಲಾ ಮೂರು ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಘೋಷಿಸಿದರು.












Click it and Unblock the Notifications