ದಶಪಥ ರಸ್ತೆಯ ಕ್ರೆಡಿಟ್ ಸಮರ: ಎಚ್. ವಿಶ್ವನಾಥ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರು, ಆಗಸ್ಟ್ 24: ಬೆಂಗಳೂರು- ಮೈಸೂರು ದಶಪಥ ರಸ್ತೆ ನಿರ್ಮಾಣ ಕ್ರೆಡಿಟ್ ಸಮರ ವಿಚಾರಕ್ಕೆ ಸಂಬಂಧಿಸಿದಂತೆ ಎಚ್. ವಿಶ್ವನಾಥ್ ವಿರುದ್ಧ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರತಾಪ್ ಸಿಂಹ, "ಮೈಸೂರು -ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ಬಗ್ಗೆ ವಿಡಿಯೋ ಮಾಡಿದ್ದು ಇಷ್ಟು ಜನರ ಹೊಟ್ಟೆಗೆ ಬೆಂಕಿ ಬೀಳಿಸುತ್ತೆ ಅಂತಾ ಗೊತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿ, ಕಾಮಗಾರಿಗೆ ಚಾಲನೆ ನೀಡಿತ್ತು. 8,666 ಕೋಟಿ ರೂ. ಪ್ರಾಜೆಕ್ಟ್ನಲ್ಲಿ 8 ಪೈಸೆನಾದರೂ ಎಚ್. ವಿಶ್ವನಾಥ್ ಬಿಡುಗಡೆ ಮಾಡಿಸಿದ್ರಾ? ಅಥವಾ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರಾ?,'' ಎಂದು ಪ್ರಶ್ನಿಸಿದ್ದಾರೆ.
"ನಿತಿನ್ ಗಡ್ಕರಿ ನಮ್ಮ ಕೇಂದ್ರ ಸರ್ಕಾರದ ಸಾರಿಗೆ ಮಂತ್ರಿ. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಶುರುವಾಗುವ ಪ್ರಾಜೆಕ್ಟ್ಗಳ ಕ್ರೆಡಿಟ್ ಮೋದಿ ಸರಕಾರಕ್ಕೆ ಸಲ್ಲಬೇಕು. ಎಚ್. ವಿಶ್ವನಾಥ್ ತಾವೇ ಈ ಯೋಜನೆ ತಂದಿದ್ದರೆ ತಮ್ಮ ಚುನಾವಣೆ ವೇಳೆ ಯಾಕೆ ಹೇಳಿಲ್ಲ?," ಎಂದು ತಿರುಗೇಟು ನೀಡಿದರು.

"ಎಂಎಲ್‌ಸಿ ಎಚ್. ವಿಶ್ವನಾಥ್ ಟೀಕೆ ಮಾಡದ ವ್ಯಕ್ತಿಗಳೇ ಇಲ್ಲ. ಅಮೆರಿಕದ ಟ್ರಂಪ್, ಬಿಡೆನ್‌ರನ್ನೇ ಬಿಟ್ಟಿಲ್ಲ. ದೇವೇಗೌಡರು, ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ. ಸೋಮಶೇಖರ್ ಎಲ್ಲರನ್ನೂ ವಿಶ್ವನಾಥ್ ಬೈಯ್ದಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಮಾತನಾಡುವುದಕ್ಕೆ ಏನು ಸಿಕ್ಕಿಲ್ಲ. ಅದಕ್ಕಾಗಿ ಈ ಗ್ಯಾಪ್ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ," ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಚರ್ಚೆಗೆ ಸಿದ್ಧ
"ಎಚ್. ವಿಶ್ವನಾಥ್ ಅವರೇ, ಮೈಸೂರು -ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ಬಗ್ಗೆ ಮಾಧ್ಯಮದ ಮುಂದೆ ಚರ್ಚೆ ಮಾಡೋಣ ಬನ್ನಿ. ಈ ಯೋಜನೆಯ ಬಗ್ಗೆ ಚರ್ಚೆಯಾಗಲಿ ಅಂತ ಹೇಳಿದ ಪ್ರತಾಪ್ ಸಿಂಹ, ಹಳೆ ಉಂಡುವಾಡಿ ಕುಡಿಯುವ ನೀರು ಯೋಜನೆಗೂ ವಿಶ್ವನಾಥ್ ಐದು ಪೈಸೆ ಕೊಡಿಸಿಲ್ಲ. ನೀವು ಸತ್ಯಸಂದರ ರೀತಿ ಮಾತಾಡಬೇಡಿ," ಎಂದು ಹೇಳಿದರು.
ಇದೇ ವೇಳೆ, "ಮಾಜಿ ಸಚಿವ ಮಹದೇವಪ್ಪ ಅವರೇ ನೀವು ನಿಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಒಂದು ರಸ್ತೆ ನೆಟ್ಟಗಿದ್ದಿಯಾ? ನಿಮಗೆ ದಶಪಥ ರಸ್ತೆಯ ಕ್ರೆಡಿಟ್ ಬೇಕಾ? ನೀವು ಹಿರಿಯರು ನೀವು ಮಾರ್ಗದರ್ಶನ ಮಾಡಿ ಸರ್, ಬೀದಿ ಜಗಳಕ್ಕೆ ಇಳಿಯಬೇಡಿ," ಎಂದು ತಿಳಿಸಿದರು.

"ದಶಪಥ ರಸ್ತೆಯಲ್ಲಿ ಎಲ್ಲಿ ಅವೈಜ್ಞಾನಿಕ ಕಾಮಗಾರಿ ಆಗಿದೆ ಅಂತಾ ಮಂಡ್ಯ ಸಂಸದೆ ಸುಮಲತಾ ತೋರಿಸಲಿ. ಇಲ್ಲ ಒಂದು ಕರೆ ಮಾಡಿ ಅಥವಾ ಮೆಸೇಜ್ ಮಾಡಿ ಸಾಕು. 24 ಗಂಟೆ ಒಳಗೆ ನಾನು ಸ್ಥಳದಲ್ಲಿ ಇರುತ್ತೇನೆ. ತಜ್ಞರನ್ನು ನಾನೇ ಕರೆದುಕೊಂಡು ಬರುತ್ತೇನೆ. ರಸ್ತೆ ಅವೈಜ್ಞಾನಿಕವಾಗಿದ್ದರೆ, ಅದನ್ನು ನೀವು ಹೇಳಿದ ರೀತಿ ವೈಜ್ಞಾನಿಕವಾಗಿಯೇ ಸರಿ ಪಡಿಸುತ್ತೇವೆ," ಎಂದು ಸುಮಲತಾ ವಿರುದ್ಧವೂ ವಾಗ್ದಾಳಿ ನಡೆಸಿದರು.
"ಸುಮ್ಮನೆ ಅದು ಅವೈಜ್ಞಾನಿಕ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ನಿಮಗೆ ಮಾಡಲು ಆಗದ ಕನಸುಗಳನ್ನು ನನಗೆ ಹೇಳಿ. ನಾನು ಮಾಡಿ ಕೊಡುತ್ತೇನೆ. ಕೇಂದ್ರದ ಯಾವ ಅಧಿಕಾರಿಯನ್ನು ಕರೆತರಬೇಕು ಹೇಳಿ. ನಾನು ಕರೆದುಕೊಂಡು ಬರುತ್ತೇನೆ. ನಮ್ಮ ಸಾಹೇಬರು ಹೇಳಿರುವ ಕೆಲಸ ಎಂದು ಮಾಡುತ್ತೇನೆ," ಎಂದು ಮಂಡ್ಯ ಸಂಸದೆ ಸುಮಲತಾಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.
"ಪ್ರಧಾನಿ ಮೋದಿ ಭಾರತ ಮಾತೆಯ ಸುಪುತ್ರ. ಅವರು ಮಾಡುವ ಎಲ್ಲಾ ಕೆಲಸವೂ ಭಾರತ ಮಾತೆಗೆ ಸೇರಿದ್ದು. ನಮ್ಮ ಕ್ಷೇತ್ರದಲ್ಲಿ ಮಾಡುವ ಕೆಲಸ ಭಾರತ ಮಾತೆಗೆ ಸೇರಿದ್ದು ಎಂದು ಹೇಳುವ ಕಾಲ ಈಗ ಬಂತಲ್ಲ ನನಗೆ ಸಂತೋಷವಾಗಿದೆ. ಮಾಜಿ ಸಚಿವ ರಾಮದಾಸ್‌ರವರ ಕೆ.ಆರ್. ಕ್ಷೇತ್ರದಲ್ಲಿ ದಶಕಗಳಿಂದ ಬಿದ್ದಿರುವ ಕಸವನ್ನು ಸ್ವಚ್ಛ ಮಾಡುವ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಅದರ ಕ್ರೆಡಿಟ್ ಕೂಡ ಭಾರತ ಮಾತೆಗೆ ಸೇರುತ್ತದೆ," ಎಂದು ಪ್ರತಾಪ್ ಸಿಂಹ ಹೇಳಿದರು.

Recommended Video
ಒಟ್ಟಿನಲ್ಲಿ ಮೈಸೂರು -ಬೆಂಗಳೂರು ದಶಪಥ ರಸ್ತೆಯ ಕಾಮಗಾರಿ ಬಗ್ಗೆ ಮೈಸೂರು ಭಾಗದ ರಾಜಕಾರಣಿಗಳು ತಮಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಆದರೆ ಈ ರಸ್ತೆಯಿಂದ ಜನರಿಗೆ ಅನುಕೂಲವಾಗುವುದರ ಜೊತೆಗೆ, ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ದೊರಕಿದರೆ ಸಾಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.












Click it and Unblock the Notifications