Arun Yogiraj: ನಂದಿ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್; ಅಮರನಾಥ ದೇಗುಲದಲ್ಲಿ ಪ್ರತಿಷ್ಠಾಪನೆ
ಮೈಸೂರಿನ ಖ್ಯಾತ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಅವರು ಕಾಶ್ಮೀರದ ಅಮರನಾಥ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಲು ನಂದಿ ವಿಗ್ರಹವನ್ನು ಕೆತ್ತಿ ಕೊಟ್ಟಿದ್ದಾರೆ.
ಅಯೋಧ್ಯೆ ರಾಮಮಂದಿರಕ್ಕೆ ಬಾಲರಾಮನನ್ನು ಮಾಡಿ ಖ್ಯಾತಿ ಗಳಿಸಿರುವ ಮೈಸೂರಿನ ಶಿಲ್ಪ ಕಲಾವಿದ ಅರುಣ ಯೋಗಿರಾಜ್ ಕೀರ್ತಿಗೆ ಇದೀಗ ಮತ್ತೊಂದು ಕಿರೀಟ ಸೇರ್ಪಡೆಯಾಗಿದೆ. ಐತಿಹ್ಯ ಇರುವ ಅಮರನಾಥ ದೇಗುಲದ ಹಿಮದ ಉದ್ಭವ ಶಿವಲಿಂಗದ ಮುಂದೆ ಜೂನ್ ತಿಂಗಳಿನಲ್ಲಿ ಯೋಗಿರಾಜ್ ಕೆತ್ತಿರುವ ನಂದಿ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.

"ಅಮರನಾಥ ಯಾತ್ರೆ ಮಾಡಲು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ನಮ್ಮ ಹಿಂದೂಗಳ ಪವಿತ್ರ ಸ್ಥಳ ಅದು. ಇಂತಹ ಜಾಗದಲ್ಲಿ ನಾನು ಕೆತ್ತಿದ ನಂದಿ ವಿಗ್ರಹ ಪ್ರತಿಷ್ಠಾಪನೆ ಆಗುತ್ತಿರುವುದು ಖುಷಿಯ ವಿಚಾರ. ಸುಮಾರು ಎರಡೂವರೆ ತಿಂಗಳ ಪರಿಶ್ರಮದ ಲವಾಗಿ ಸುಂದರವಾಗಿ ನಂದಿ ವಿಗ್ರಹ ಮೂಡಿ ಬಂದಿದೆ" ಎಂದು ಕಲಾವಿದ ಅರುಣ್ ಯೋಗಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸ್ಥಾಪಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನೂ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಜೊತೆಗೆ ಕೇದಾರನಾಥದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಶಿಲ್ಪ ಹಾಘೂ ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಕೂಡ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.
ಈ ನಂದಿ ವಿಗ್ರಹವು ಮೂರು ಅಡಿ ಎತ್ತರ ಹಾಗೂ ನಾಲ್ಕು ಅಡಿ ಉದ್ದವಿದ್ದು, ಕೃಷ್ಣ ಶಿಲೆಯಲ್ಲಿ ಕೆತ್ತಲಾಗಿದೆ. ಮೈಸೂರಿನ ಎಚ್.ಡಿ.ಕೋಟೆಯ ಕೃಷ್ಣಶಿಲೆಯನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಐದು ಟನ್ ಇದ್ದ ಈ ಕಲ್ಲು ಕೆತ್ತನೆ ಬಳಿಕ ಒಂದೂವರೆ ಟನ್‌ಗೆ ಇಳಿಕೆಯಾಗಿದೆ, ದಕ್ಷಿಣ ಭಾರತದ ಕಲೆಯನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಕಾಶ್ಮೀರದ ಅಮರನಾಥ್ ಶಿರಿನ್ ಬೋರ್ಡ್ ಅರುಣ್ ಯೋಗಿರಾಜ್‌ಗೆ ನಂದಿ ವಿಗ್ರಹ ಕೆತ್ತಿಕೊಡುವ ಕೆಲಸವನ್ನು ನೀಡಿತ್ತು. ಇದೀಗ ನಂದಿ ವಿಗ್ರಹವನ್ನು ಮೈಸೂರಿನಿಂದ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದ್ದು, 10 ದಿನದೊಳಗೆ ಅಮರನಾಥವನ್ನು ತಲುಪಲಿದೆ. ನಂದಿ ಕತ್ತಿಗೆ ಗೆಜ್ಜೆ, ಗಂಟೆ, ಹಗ್ಗ, ಸರಪಳಿ, ಪತಾಕೆಯನ್ನು ಚಿತ್ರಿಸಲಾಗಿದೆ. ನಂದಿಯ ಹಿಂಭಾಗ ಮಾವಿನಕಾಯಿಯ ರೀತಿ ಅಲಂಕಾರ ಮಾಡಲಾಗಿದೆ.












Click it and Unblock the Notifications