ದಸರಾ ವೇಳೆಯೇ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ, ದುಪ್ಪಟ್ಟಾಯ್ತು ಸಂಭ್ರಮ!
ಮೈಸೂರು ರಾಜವಂಶಸ್ಥರಾದ ಒಡೆಯರ್ ಅವರಿಂದಾಗಿ ದಸರಾ ಜಗದ್ವಿಖ್ಯಾತಿಯಾಗಿದೆ. ಹಬ್ಬದ ಸಮಯದಲ್ಲೇ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ದಸರಾ ಹೊತ್ತಲ್ಲೇ ಒಡೆಯರ್ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ ಮನೆಮಾಡಿದೆ.
ಯದುವೀರ್ ಹಾಗೂ ಪತ್ನಿ ರಾಣಿ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ. ಮೈಸೂರು ದಸರಾ ಆಚರಣೆಯಲ್ಲಿದ್ದ ರಾಜರ ಕುಟುಂಬವು ಸದ್ಯ ಎರಡೆರಡು ಹಬ್ಬದ ಸಂಭ್ರಮದಲ್ಲಿದೆ.

ಈ ವರ್ಷ ಯುವರಾಜ ಯದುವೀರ್ ಒಡೆಯರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸದ್ಯ ಬಿಜೆಪಿ ಸಂಸದರೂ ಆಗಿದ್ದಾರೆ. ಮತ್ತೊಂದೆಡೆ ದಸರಾ ಸಂಭ್ರಮದ ಜೊತೆಗೆ ಎರಡನೇ ಪುತ್ರನ ಆಗಮನದೊಂದಿಗೆ ಹರುಷದ ಕಡಲಲ್ಲಿ ತೇಲಿದ್ದಾರೆ.
ಮಗುವಿನ ಜನನದ ಬೆನ್ನಲ್ಲೇ ಮೈಸೂರಿಗೆ ಮತ್ತೊಬ್ಬ ಯುವರಾಜನ ಆಗಮನವಾಗಿದೆ ಎಂದು ಸಾಂಸ್ಕೃತಿಕ ನಗರಿಯ ಜನ ಫುಲ್ ಖುಷ್ ಆಗಿದ್ದಾರೆ. ವಿಜಯದಶಮಿಗೆ ಒಂದು ದಿನ ಬಾಕಿಯಿದೆ. ದಸರಾ ಜಂಬೂಸವಾರಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಮೈಸೂರಿನ ಅರಮನೆಯಲ್ಲಿ ಆಯುಧಪೂಜೆಯ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಇದೇ ವೇಳೆ ಯುವರಾಜನ ಜನನವು ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಯದುವೀರ್ ಅವರು ಖಾಸಗಿ ದರ್ಬಾರ್ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ತ್ರಿಷಿಕಾ ಕುಮಾರಿ ಅವರನ್ನು ಗುರುವಾರ (ನಿನ್ನೆ) ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಹೊತ್ತಲ್ಲಿ ಹೆರಿಗೆಯಾಗಿದ್ದು, ಈ ವಿಚಾರ ಅರಮನೆಯಲ್ಲಿದ್ದ ಯದುವೀರ್ ಅವರಿಗೆ ತಲುಪಿತು. ಇಂದು ಆಯುಧಪೂಜೆಯ ಸಂಭ್ರಮದ ವೇಳೆ ತಮಗೆ ಎರಡನೇ ಮಗು ಜನಿಸಿರುವ ವಿಷಯ ಕೇಳಿ ಯದುವೀರ್ ಸಂಭ್ರಮಿಸಿದ್ದಾರೆ.
ಸದ್ಯ ಯದುವೀರ್ ಅವರು ಖಾಸಗಿ ದರ್ಬಾರ್‌ನಲ್ಲಿ ಇರುವ ಕಾರಣದಿಂದ ಅವರು ಕಂಕಣಧಾರಿಯಾಗಿದ್ದಾರೆ. ಹಾಗಾಗಿ ಯದುವೀರ್ ಅವರು ಮೈಸೂರು ಅರಮನೆಯಿಂದ ಹೊರಗೆ ಹೋಗುವಂತಿಲ್ಲ. ಖಾಸಗಿ ದರ್ಬಾರ್ ಪೂರ್ಣಗೊಂಡ ಬಳಿಕವೇ ಅವರು ಅರಮನೆಯಿಂದ ಹೊರಬಂದು ತಮ್ಮ ಪುತ್ರನನ್ನು ಕಣ್ತುಂಬಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತ್ರಿಷಿಕಾ ಕುಮಾರಿ ಅವರನ್ನು 2016ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಆದ್ಯವೀರ್ ಎಂದು ನಾಮಕರಣ ಮಾಡಲಾಗಿದೆ. ಇದೀಗ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ ಕಾಲಿಟ್ಟಿದೆ.












Click it and Unblock the Notifications