ಮೈಸೂರು ದಸರಾ ಯಶಸ್ವಿಗೆ ಸಜ್ಜಾದ ಪೊಲೀಸರು!

ಮೈಸೂರು, ಅಕ್ಟೋಬರ್ 1: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡದೆ ಯಶಸ್ವಿಯಾಗಿ ದಸರಾವನ್ನು ನಡೆಸಲು ಪೊಲೀಸ್ ಇಲಾಖೆ ಸರ್ವ ರೀತಿಯಲ್ಲಿ ಸಜ್ಜಾಗುತ್ತಿದೆ.

ಪೊಲೀಸರು ಮೈಸೂರು ನಗರದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳುವ ಮೂಲಕ ಜನ ದಸರಾವನ್ನು ಯಾವುದೇ ಭಯವಿಲ್ಲದೆ ಆಚರಣೆ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಬಹುಶಃ ಕೊರೊನಾ ಮಹಾಮಾರಿ ಬಾರದೆ ಹೋಗಿದ್ದಿದ್ದರೆ ದಸರಾ ಸಡಗರ ಮೈಸೂರನ್ನು ತುಂಬಿ ಜನರನ್ನು ಸಂಭ್ರಮದಲ್ಲಿ ತೇಲಿಸಿ ಬಿಡುತ್ತಿತ್ತು.

ಬೀದಿ ಬದಿ ವ್ಯಾಪಾರಿಗಳಿಂದ ಆರಂಭವಾಗಿ ದೊಡ್ಡ ದೊಡ್ಡ ವ್ಯಾಪಾರಿಗಳ ತನಕ, ಬಡವರಿಂದ ಶ್ರೀಮಂತರ ತನಕ ಎಲ್ಲರೂ ಮೈಕೊಡವಿಕೊಂಡು ಮೇಲೆದ್ದು ದಸರಾದಲ್ಲಿ ಒಂದಷ್ಟು ವ್ಯಾಪಾರ ಮಾಡಿಕೊಂಡು ಬದುಕನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು. ಇನ್ನು ಸ್ಥಳೀಯರಲ್ಲದೆ ದೂರದಿಂದ ವ್ಯಾಪಾರಸ್ಥರು ನಗರಕ್ಕೆ ಬಂದು ಒಂದಷ್ಟು ದಿನ ವಾಸ್ತವ್ಯ ಹೂಡಿ ವ್ಯಾಪಾರ ಮುಗಿಸಿಕೊಂಡು ಹಿಂತಿರುಗುತ್ತಿದ್ದರು. ಪ್ರವಾಸಿಗರು ಕುಟುಂಬ ಸಮೇತ ಆಗಮಿಸಿ ವಾಸ್ತವ್ಯ ಹೂಡಿ ನಗರದಲ್ಲಿ ಅಡ್ಡಾಡುತ್ತಾ ಖುಷಿ ಪಡುತ್ತಿದ್ದರು. ಕೆಎಸ್‍ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿ ದೂರದಿಂದ ಮೈಸೂರಿಗೆ ಪ್ರವಾಸಿಗರು ಬರುವಂತೆ ನೋಡಿಕೊಳ್ಳುತ್ತಿತ್ತು.

 ದಸರಾ ಖುಷಿಯಲ್ಲಿ ತೇಲಾಡುತ್ತಿದ್ದ ಮೈಸೂರು

ದಸರಾ ಖುಷಿಯಲ್ಲಿ ತೇಲಾಡುತ್ತಿದ್ದ ಮೈಸೂರು

ನಗರದಲ್ಲಿದ್ದ ಹೋಟೆಲ್, ಲಾಡ್ಜ್, ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದರೆ, ಮನೆಗಳು ಕೂಡ ನೆಂಟರಿಂದ ಗಿಜಿಗುಡುತ್ತಿತ್ತು. ಹಳ್ಳಿಯಲ್ಲಿದ್ದವರು ನಗರದಲ್ಲಿರುವ ಬಂಧುಗಳ ಮನೆಗೆ ಬರುತ್ತಿದ್ದರು. ಎಲ್ಲರೂ ಸಂಜೆಯಾಗುತ್ತಿದ್ದಂತೆಯೇ ಬೆಳಗುವ ವಿದ್ಯುದ್ದೀಪದ ಅಂದ ನೋಡುತ್ತಾ ನಗರದೆಲ್ಲೆಡೆ ಅಡ್ಡಾಡುತ್ತಾ ಖುಷಿ ಪಡುತ್ತಿದ್ದರು. ಸೇವಿಸುವುದಕ್ಕೆ ಬಗೆ ಬಗೆಯ ತಿನಿಸುಗಳು, ಆಡುವುದಕ್ಕೆ ವಸ್ತುಪ್ರದರ್ಶನ ಆವರಣದಲ್ಲಿ ವಿವಿಧ ಆಟಗಳು, ಸಂಗೀತ ಕಾರ್ಯಕ್ರಮಗಳು. ಇಷ್ಟೇ ಅಲ್ಲದೆ ದಸರಾ ಪ್ರಯುಕ್ತ ವಿವಿಧ ಸ್ಪರ್ಧೆಗಳು, ಸಾಹಿತ್ಯ ಕಾರ್ಯಕ್ರಮಗಳು ಒಂದೇ ಎರಡೇ, ಇಡೀ ನಗರ ದಸರಾ ಖುಷಿಯಲ್ಲಿ ತೇಲಾಡುತ್ತಿತ್ತು.

 ಸರಳ ದಸರಾದಿಂದಾಗಿ ಜನರಲ್ಲಿ ನಿರಾಸೆ

ಸರಳ ದಸರಾದಿಂದಾಗಿ ಜನರಲ್ಲಿ ನಿರಾಸೆ

ಕಳೆದ ವರ್ಷದಿಂದ ಮೈಸೂರು ದಸರಾ ಸಂಭ್ರಮವನ್ನು ಕೊರೊನಾ ಕಾರ್ಮೋಡ ನುಂಗಿ ಹಾಕಿದೆ. ಸಾಂಪ್ರದಾಯಿಕ ಮತ್ತು ಸರಳ ದಸರಾ ಆಗಿರುವ ಕಾರಣದಿಂದ ಸರ್ಕಾರ ದಸರಾವನ್ನು ಹಿಂದಿನ ಸಂಪ್ರದಾಯದಂತೆ ನಡೆಸಿ ಕೈತೊಳೆದು ಕೊಳ್ಳುತ್ತಿದೆ. ಹೀಗಾಗಿ ಜನರ ದಸರಾವಾದಂತೆ ಗೋಚರಿಸುತ್ತಿಲ್ಲ. ದಸರಾಕ್ಕೆ ದಿನಗಳು ಹತ್ತಿರವಾದರೂ ಇನ್ನೂ ಕೂಡ ದಸರಾ ಕಳೆ ನಗರದಲ್ಲಿ ಕಾಣಿಸುತ್ತಿಲ್ಲ. ದಸರಾ ಬಂದಾಗಲೆಲ್ಲ ವರ್ಷದ ಕೂಳನ್ನು ಸಂಪಾದಿಸಿಕೊಳ್ಳುವ ತವಕದಲ್ಲಿದ್ದ ಆಟೋ ಚಾಲಕರು, ಟಾಂಗಾವಾಲಾಗಳು, ಬೀದಿ ಬದಿ ವ್ಯಾಪಾರಿಗಳು ಹೀಗೆ ದಸರಾ ಸುತ್ತ ಪ್ರತಿವರ್ಷ ಆಶಾಗೋಪುರ ಕಟ್ಟಿಕೊಳ್ಳುತ್ತಿದ್ದವರು ನಿರಾಸೆಯಲ್ಲಿದ್ದಾರೆ.

 ಸಂಭ್ರಮಕ್ಕೆ ಯಾವತ್ತೂ ತುಕ್ಕು ಹಿಡಿದಿರಲಿಲ್ಲ

ಸಂಭ್ರಮಕ್ಕೆ ಯಾವತ್ತೂ ತುಕ್ಕು ಹಿಡಿದಿರಲಿಲ್ಲ

ಬಹುಶಃ ಯಾರು ಕೂಡ ಇಂತಹ ಪರಿಸ್ಥಿತಿ ಬಂದೊದಗಲಿದೆ ಎಂಬುದನ್ನು ಊಹಿಸಿರಲಿಲ್ಲ. ಬರ, ಪ್ರವಾಹ ಬಂದಾಗಲೆಲ್ಲ ದಸರಾಕ್ಕೆ ನೀಡಲಾಗುತ್ತಿದ್ದ ಅನುದಾನ ಕಡಿಮೆ ಮಾಡಿ ಒಂದಷ್ಟು ವ್ಯರ್ಥ ಖರ್ಚುಗಳಿಗೆ ಕಡಿವಾಣ ಹಾಕಲಾಗುತ್ತಿತ್ತಾದರೂ ಸಂಭ್ರಮಕ್ಕೆ ಯಾವತ್ತೂ ತುಕ್ಕು ಹಿಡಿದಿರಲಿಲ್ಲ. ಆದರೆ ಕಳೆದ ವರ್ಷದಿಂದೀಚೆಗೆ ಜನರಲ್ಲಿ ಸಂಭ್ರಮವೇ ಇಲ್ಲದಂತಾಗಿದೆ.

ಇದೆಲ್ಲದರ ನಡುವೆ ದಸರಾ ಆಚರಣೆ ಸರಳವಾದರೂ ಪೊಲೀಸ್ ಇಲಾಖೆ ಭದ್ರತೆಯನ್ನು ಮಾತ್ರ ಬಿಗಿಯಾಗಿಯೇ ಮಾಡಬೇಕಾಗಿದೆ. ಈ ಬಾರಿ ದಸರಾ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡದೆ ಹೋದರೂ ಕೂಡ ಪೊಲೀಸ್ ಇಲಾಖೆ ಸನ್ನದ್ಧವಾಗಿ ಇರಲೇ ಬೇಕಾಗಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚಿನ ಮುತುರ್ವಜಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ವಹಿಸಿದ್ದು, ಸನ್ನದ್ಧರಾಗಿರುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

 ವಾಸ್ತವ್ಯ ಹೂಡುವರತ್ತ ಪೊಲೀಸ್ ನಿಗಾ

ವಾಸ್ತವ್ಯ ಹೂಡುವರತ್ತ ಪೊಲೀಸ್ ನಿಗಾ

ಸದ್ಯ ಮೈಸೂರು ನಗರದಲ್ಲಿ ರಾತ್ರಿ ಪೊಲೀಸ್ ಬೀಟ್ ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗಿದೆ. ಅಲ್ಲದೆ ನಗರದ ಲಾಡ್ಜ್, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರ ಬಗ್ಗೆ ಪೂರ್ಣ ನಿಗಾವನ್ನು ಪೊಲೀಸರು ವಹಿಸುತ್ತಿದ್ದಾರೆ. ಜತೆಗೆ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದೇಶಿ ಪ್ರಜೆಗಳ ಮಾಹಿತಿ ಸಂಗ್ರಹಿಸಿ ಅವರ ಬಗ್ಗೆ ವಿಶೇಷ ಗಮನ ಹರಿಸಲು ಪೊಲೀಸರು ಮುಂದಾಗಿದ್ದಾರೆ. ಮಾದಕ ವಸ್ತುಗಳ ಮಾರಾಟದ ಜಾಲ ಹರಡಿಕೊಂಡಿರುವ ಹಿನ್ನಲೆಯಲ್ಲಿ ಅದರ ನಿಯಂತ್ರಣಕ್ಕೆ ನಿರಂತರ ದಾಳಿಗಳನ್ನು ನಡೆಸಿ ಹತ್ತಿಕ್ಕಲು ಪ್ರತ್ಯೇಕ ತಂಡವನ್ನು ನಿಯೋಜಿಸಲಾಗಿದ್ದು, ಡಾಗ್ ಸ್ಕ್ವಾಡ್ ಬಳಸಿಕೊಳ್ಳಲಾಗುತ್ತಿದೆ.

ಸಂಜೆ 6ರಿಂದ 11ರವರೆಗೆ ಅಂದರೆ ಮೈಸೂರು ಸ್ತಬ್ಧವಾಗುವವರೆಗೆ ಪೊಲೀಸರ ನೈಟ್ ಬೀಟ್ ನಡೆಯಲಿದ್ದು, ಇಡೀ ನಗರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಾರೆ ದಸರಾ ಸರಳವಾಗಿ ನಡೆದರೂ ಯಾವುದೇ ರೀತಿಯ ತೊಂದರೆಗಳಾಗದಂತೆ ನಡೆಸಲು ಕಟ್ಟುನಿಟ್ಟಿನ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿರುವುದು ಕಂಡು ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+