ಮೈಸೂರಿನಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಪಾಠ ಹೇಳಿದ ಗಣಪ
ಮೈಸೂರು, ಜುಲೈ 18 :ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮೈಸೂರು ಪೊಲೀಸರು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುವವರಿಗೆ ಪೊಲೀಸರು 'ಗಣಪನಿಂದ ವಾರ್ನಿಂಗ್' ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದಾರೆ.
ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು, ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ತಿಳಿಹೇಳಲು ಗಣೇಶ ವೇಷಧಾರಿ ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ತಡೆದು ಗುಲಾಬಿ ಹೂ ನೀಡಿ, ಹೆಲ್ಮೆಟ್ ಧರಿಸುವಂತೆ ಪಾಠ ಹೇಳಿದ್ದಾರೆ.

ರಸ್ತೆ ಸುರಕ್ಷಿತ ಹಾಗೂ ಸಂಚಾರ ನಿರ್ವಹಣೆ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ಜಾಗೃತಿ ಕುರಿತು ಕಾರ್ಯಕ್ರಮವನ್ನು ನಡೆಸಿದರು. ನಗರದ ರೈಲ್ವೆ ವೃತ್ತದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅಂದಹಾಗೆ ರಸ್ತೆಯಲ್ಲಿ ಗಣೇಶನನ್ನು ಅಂದರೆ ಗಣೇಶ ವೇಷಧಾರಿ ಕಂಡು ಸಾರ್ವಜನಿಕರು ತಬ್ಬಿಬ್ಬಾದರು. ಇತ್ತೀಚೆಗೆ ಯಮನ ವೇಷಧಾರಿಯಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗಿತ್ತು. ಅಲ್ಲದೇ, ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ದಂಡ ಹಾಕುವ ಬದಲು ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.











Click it and Unblock the Notifications