ಮೈಸೂರು ಸೇಡಿನ ಕೊಲೆ ಪ್ರಕರಣ; ಇಬ್ಬರ ಬಂಧನ
ಮೈಸೂರು, ಮೇ 8: ಗುರುವಾರ ರಾತ್ರಿ ಗಾಯತ್ರಿಪುರಂನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಉಪ ಆಯುಕ್ತ ಎ.ಎನ್ ಪ್ರಕಾಶ್ ಗೌಡ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಉಪ ಆಯುಕ್ತ ಪ್ರಕಾಶ್ ಗೌಡ ಅವರು, ಕೊಲೆ ಮಾಡಿದವರೇ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾರೆ ಎಂದರು. ಕಳೆದ ಸೋಮವಾರ ರಾತ್ರಿ ಸತೀಶ್ ಎಂಬಾತನನ್ನು ಆತನ ಸ್ನೇಹಿತರೇ ಆಗಿದ್ದ ಕಿರಣ ಮತ್ತು ಮಧು ಎಂಬುವವರು ಕೊಲೆ ಮಾಡಿದ್ದರು ಎಂದು ತಿಳಿಸಿದರು.
ಇದಕ್ಕೆ ಪ್ರತೀಕಾರವಾಗಿ ಸತೀಶನ ಸ್ನೇಹಿತರಾದ ಇರ್ಫಾನ್ ಮತ್ತು ಮಹೇಂದ್ರ ಎಂಬುವವರು ಕಿರಣನ ತಮ್ಮ ಅಭಿಲಾಷ್ ಎಂಬುವವನನ್ನು ಗುರುವಾರ ರಾತ್ರಿ ಚಾಕು ಇರಿದು ಕೊಲೆ ಮಾಡಿದ್ದರು ಎಂದರು.
ನಂತರ ಪೋಲೀಸರಿಗೆ ಕರೆ ಮಾಡಿ ಕೊಲೆ ಮಾಡಿರುವ ವಿಷಯ ಹೇಳಿ ನಾಪತ್ತೆ ಆಗಿದ್ದರು. ನಂತರ ಶುಕ್ರವಾರ ಪೊಲೀಸರ ಮುಂದೆ ಇಬ್ಬರೂ ಶರಣಾಗಿದ್ದಾರೆ. ಸತೀಶನ ಪರಿಚಯದ ಅಪ್ರಾಪ್ತ ಹುಡುಗಿಯನ್ನು ಕಿರಣ ಪ್ರೀತಿಸಿದ್ದಕ್ಕೆ ಸತೀಶ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಯುವತಿಯೊಬ್ಬಳ ವಿಷಯವಾಗಿ ಎರಡು ಜೀವಗಳು ಬಲಿಯಾಗಿವೆ ಎಂದು ಪೊಲೀಸ್ ಉಪ ಆಯುಕ್ತ ಪ್ರಕಾಶ ಗೌಡ ಮಾಹಿತಿ ನೀಡಿದರು.