ಮೈಸೂರಿನಲ್ಲಿ ಸತ್ತ ಚಿರತೆ ಹೊತ್ತು ಸೆಲ್ಫಿಗೆ ಮುಗಿಬಿದ್ದ ಜನ
ಮೈಸೂರು, ಜುಲೈ 26: ಚಿರತೆಯೊಂದನ್ನು ಜನರು ಹೊತ್ತುಕೊಂಡು ಸೆಲ್ಫಿಗೆ ಮುಗಿಬೀಳುತ್ತಿರುವ ದೃಶ್ಯ ನೋಡಿದರೆ ಒಮ್ಮೆ ಎದೆ ಝಲ್ಲೆನ್ನಬಹುದು. ಆದರೆ ಹೆದರಬೇಡಿ, ಈ ಚಿರತೆಗೆ ಜೀವವಿಲ್ಲ. ಅರಣ್ಯ ಇಲಾಖೆಯ ಎಡವಟ್ಟಿಗೆ ಪ್ರಾಣ ಕಳೆದುಕೊಂಡ ಚಿರತೆ ಇದು!
ಪಾಪ, ಮೈಸೂರಿನ ಸಮೀಪದ ಗೋಹಳ್ಳಿ ಬಳಿ ಸೆರೆ ಹಿಡಿಯಲಾಗಿದ್ದ ಚಿರತೆ ಸಾವನ್ನಪ್ಪಿದ್ದು, ಅವೈಜ್ಞಾನಿಕವಾಗಿ ಚಿರತೆಯನ್ನು ಸೆರೆಹಿಡಿದಿರುವುದೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಸತ್ತ ಚಿರತೆಯನ್ನು ಜನರು ಹೊತ್ತು, ಸೆಲ್ಫಿಗೆ ಮುಗಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇತ್ತೀಚೆಗೆ ಮೈಸೂರು ವ್ಯಾಪ್ತಿಯಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಸಾಮಾನ್ಯವಾಗಿದ್ದು, ಅವುಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೂ ಒಂದಲ್ಲ ಒಂದು ಕಡೆ ಅರಣ್ಯದಿಂದ ನಾಡಿನತ್ತ ಬರುವ ಚಿರತೆಗಳು ಮನುಷ್ಯನಿಗೆ ಭಯಹುಟ್ಟಿಸುತ್ತಿವೆ. ಜತೆಗೆ ಜಾನುವಾರು, ನಾಯಿಗಳ ಮೇಲೆ ದಾಳಿ ಮಾಡುತ್ತಿವೆ.

ಚಿರತೆ ಪ್ರತ್ಯಕ್ಷವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅವುಗಳನ್ನು ಸೆರೆ ಹಿಡಿಯುವ ಯತ್ನವನ್ನು ಮಾಡುತ್ತಲೇ ಇದ್ದಾರೆ. ಆದರೂ ಕೆಲವೊಮ್ಮೆ ಆಗುವ ಪ್ರಮಾದದಿಂದ ಚಿರತೆಗಳು ಸಾವನ್ನಪ್ಪುತ್ತಿವೆ. ಇದೀಗ ಗೋಹಳ್ಳಿಯಲ್ಲಿಯೂ ಇದೇ ರೀತಿಯ ಎಡವಟ್ಟಾಗಿದೆ. ಸ್ಥಳೀಯರ ಪ್ರಕಾರ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಅವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿದಿದ್ದರಿಂದ ಹೀಗಾಗಿದೆ ಎಂಬುದು ಅವರ ಆರೋಪವಾಗಿದ್ದು, ಅದಕ್ಕೆ ಕಾರ್ಯಾಚರಣೆಯ ಕಾರ್ಯವೈಖರಿ ಬಗ್ಗೆ ದೂರಿರುವ ಪ್ರಾಣಿಪ್ರಿಯರು ಚರಂಡಿಯಲ್ಲಿದ್ದ ಚಿರತೆಗೆ ಬಲೆ ಹಾಕುವ ವೇಳೆ ಬಲೆ ಕುತ್ತಿಗೆಗೆ ಸಿಲುಕಿದೆ.

ಹಾಗೆಯೇ ಎಳೆದ ಪರಿಣಾಮ ಕುತ್ತಿಗೆಗೆ ಗಂಭೀರ ಗಾಯವಾಗಿ ಚಿರತೆ ಸಾವಿಗೀಡಾಗಿದೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ. ಆದರೆ ಈ ಆರೋಪವನ್ನು ಅರಣ್ಯ ಇಲಾಖೆ ಒಪ್ಪುತ್ತಿಲ್ಲ. ಅದು ಏನೇ ಇರಲಿ ಇನ್ನು ಮುಂದೆಯಾದರೂ ಅರಣ್ಯದಿಂದ ಬರುವ ಚಿರತೆಗಳತ್ತ ನಿಗಾ ವಹಿಸಬೇಕಿದೆ.












Click it and Unblock the Notifications