ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಲಕ್ಷ್ಮೀಪುರಂ ಪೊಲೀಸರಿಂದ ಎಫ್ಐಆರ್
ಮೈಸೂರು, ಜೂನ್ 24: ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರದಂದು ಕಹಿ ಸುದ್ದಿ ಸಿಕ್ಕಿದೆ. ಭೂ ಖರೀದಿ ಅಕ್ರಮ ಪ್ರಕರಣವೊಂದರಲ್ಲಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ಲಕ್ಷ್ಮೀಪುರಂ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ.
1997ರಲ್ಲಿ ಸಾಕಮ್ಮ ಎಂಬುವರಿಂದ ಖರೀದಿಸಿದ ಜಮೀನು, 2003ರಲ್ಲಿ ಮಾರಾಟವಾಗಿದೆ. ಈ ಭೂ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದರು ಎಂದು ಆರ್ ಟಿಐ ಕಾರ್ಯಕರ್ತ ಎನ್ ಗಂಗರಾಜು ಅವರು ಜೂನ್ 02ರಂದು ಪ್ರಧಾನ ಸಿವಿಎಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ದೂರು ಸ್ವೀಕರಿಸಿದ್ದ ಕೋರ್ಟ್ ನೀಡಿದ ಜೂನ್ 04ರಂದು ನೀಡಿದ ಆದೇಶದ ಮೇರೆಗೆ ಲಕ್ಷ್ಮೀಪುರಂ ಠಾಣೆ ಪೊಲೀಸರು, ಭಾರತೀಯ ದಂಡ ಸಂಹಿತೆ 120ಬಿ, 197, 166,17, 19, 200, 417, 409, 420 ಹಾಗೂ 468 ಅನ್ವಯ ಪ್ರಕರಣ ದಾಖಲಿಸಿಕೊಂಡು ಜೂನ್ 23ರಂದು ಎಫ್ಐಆರ್ ಹಾಕಿದ್ದಾರೆ. ಜುಲೈ 23ರೊಳಗೆ ಈ ಪ್ರಕರಣ ಕುರಿತಂತೆ ವರದಿಯನ್ನು ಕೋರ್ಟಿಗೆ ಸಲ್ಲಿಸಬೇಕಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಲ್ಲದೆ, ಮುಡಾದ ಮಾಜಿ ಚೇರ್ಮನ್ ಸಿ ಬಸವೇಗೌಡ, ಮುಡಾ ಚೇರ್ಮನ್ ಡಿ ಧ್ರುವಕುಮಾರ್, ಮುಡಾ ಆಯುಕ್ತ ಪಿಎಸ್ ಕಾಂತರಾಜು ಅವರ ವಿರುದ್ಧ ಕೂಡಾ ಎಫ್ಐಆರ್ ದಾಖಲಾಗಿದೆ.
ಸಾಕಮ್ಮ, ಸುನಂದಾ, ಅಣ್ಣಯ್ಯ ಪ್ರತಿಯೊಬ್ಬರ ಬಳಿ ಇದ್ದ 10 ಗುಂಟೆ ಒಟ್ಟಾರೆ30 ಗುಂಟೆ- ವಿಜಯನಗರ ಎರಡನೇ ಹಂತ ಸರ್ವೇ ನಂಬರ್ 70/4ಎ ಭೂಮಿಯ ಪೈಕಿ ಸಿದ್ದರಾಮಯ್ಯ ಅವರು 10 ಗುಂಟೆ ಭೂಮಿಯನ್ನು 1997ರಲ್ಲಿ ಖರೀದಿಸಿ, 2003ರಲ್ಲಿ ಮಾರಾಟ ಮಾಡಿದ್ದರು. ಈ ವ್ಯವಹಾರದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ, ಮೂಡಾ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ತಮ್ಮ ಆಪ್ತರಿಗೆ ಮಾರಾಟ ಮಾಡಿದ್ದರು ಎಂಬ ಆರೋಪವಿದೆ.












Click it and Unblock the Notifications