ಚುನಾವಣಾ ಫಲಿತಾಂಶ: ಗೆದ್ದ ಪ್ರತಾಪ್ ಸಿಂಹ, ಸೋತ ವಿಜಯ್ ಶಂಕರ್ ಹೇಳಿದ್ದೇನು?
ಮೈಸೂರು, ಮೇ 23 : ಶತಾಯ ಗತಾಯ ಗೆಲ್ಲಲೇಬೇಕೆಂದು ಹಠ ಹಿಡಿದು ಸಿ.ಹೆಚ್. ವಿಜಯ್ ಶಂಕರ್ ಗೆ ಟಿಕೆಟ್ ಕೊಡಿಸಿ ಕ್ಯಾಂಪೇನ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯರ ಕನಸು ಸೋತಿದೆ. ಈ ಬಾರಿ ಲಕ್ಷಕ್ಕೂ ಅಧಿಕ ಮತದ ಅಂತರದಿಂದ ಕಮಲ ಪಾಳಯದ ಪ್ರತಾಪ್ ಸಿಂಹ ಗೆಲುವಿನ ನಗೆ ಬೀರಿದ್ದಾರೆ. ಈ ಇಬ್ಬರೂ ನಾಯಕರು ಗೆಲುವಿಗಾಗಿ ಹೆಚ್ಚು ಪರಿಶ್ರಮ ಪಟ್ಟವರೇ. ಸೋಲು - ಗೆಲುವು ಚುನಾವಣೆಯಲ್ಲಿ ಸಾಮಾನ್ಯ, ಈ ಕುರಿತಾಗಿ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ತಮ್ಮ ಗೆಲುವಿನ ಕುರಿತಾಗಿ ಜನರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಈ ಗೆಲುವಿಗೆ ತಾಯಿ ಚಾಮುಂಡೇಶ್ವರಿ, ನನ್ನ ಕ್ಷೇತ್ರದ ನಾಲ್ವರು ಶಾಸಕರು, ಕಾರ್ಯಕರ್ತರು ಕಾರಣ. ಎಲ್ಲರಿಗೂ ನಾನು ಧನ್ಯವಾದಗಳನ್ನು ಸಮರ್ಪಿಸುತ್ತೇನೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕೆಂಬ ಕಾರಣಕ್ಕಾಗಿ ನನ್ನನ್ನು ಗೆಲ್ಲಿಸಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ದಶಪಥ ರಸ್ತೆ, ಮಡಿಕೇರಿಗೆ ಚತುಷ್ಪಥ ರಸ್ತೆ, ರೈಲ್ವೆ ಇಲಾಖೆ ಮೇಲ್ದರ್ಜೆಗೆ, ಏರ್ ಪೋರ್ಟ್ ಉನ್ನತೀಕರಣ ಸೇರಿದಂತೆ ಪ್ರತಿಯೊಂದನ್ನು ಕೂಡ ಸಂಪೂರ್ಣಗೊಳಿಸಿ ಜನರ ಋಣವನ್ನು ತೀರಿಸುತ್ತೇನೆ ಎಂದರು.
ಇನ್ನು ನಾನು ಕೇಂದ್ರ ಸಚಿವ ಸ್ಥಾನದ ಆಕಾಂಕ್ಷಿಯಿಲ್ಲ. ಮೋದಿಯವರೊಂದಿಗೆ ಕಾಣಿಸಿಕೊಳ್ಳುವುದೇ ನನ್ನ ದೊಡ್ಡ ಕನಸಾಗಿತ್ತು. ಈಗ ಮತ್ತೊಮ್ಮೆ ಅವರೊಟ್ಟಿಗೆ ಗುರುತಿಸಿಕೊಳ್ಳುವ ಭಾಗ್ಯ ಸಿಕ್ಕಿದೆ. ಅದೇ ನನ್ನ ಪುಣ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಪರಾಜಿತ ಅಭ್ಯರ್ಥಿ ಸಿ, ಹೆಚ್ ವಿಜಯ್ ಶಂಕರ್ ಮಾತನಾಡಿ, ನನ್ನ ಸೋಲು ನನಗೆ ಶಾಕ್ ನೀಡಿದೆ. ಇದು ಕೇವಲ ಒಂದು ಪಕ್ಷದ ಸೋಲಲ್ಲ. ನಮ್ಮದು ಮೈತ್ರಿ ಪಕ್ಷ. ಹಾಗಾಗಿ ಇದನ್ನು ಮೈತ್ರಿ ಧರ್ಮದ ಸೋಲೆಂದು ಭಾವಿಸುತ್ತೇನೆ. ಸೋಲನ್ನು ಮೈತ್ರಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.












Click it and Unblock the Notifications