ನಾಲೆಗಳಿಗೆ ನೀರು, 4ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪ್ರತಿಭಟನೆ
ಮೈಸೂರು, ಜುಲೈ 27 : ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಕೆಆರ್ ನಗರ ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ ಮೈಸೂರಿನ ಕಾಡಾಕಚೇರಿ ಆವರಣದಲ್ಲಿ ನಡೆಯುತ್ತಿರುವ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸಿ ಹಾರಂಗಿ ನಾಲೆಗಳಿಗೆ ನೀರು ಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಶಾಸಕ ಸಾ.ರಾ ಮಹೇಶ್ ಅವರ ನೇತೃತ್ವದಲ್ಲಿ ಮೈಸೂರಿನ ಕಾಡಾ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಚಿತ್ರನಟ ಸಾಧುಕೋಕಿಲ ಬುಧವಾರ ರಾತ್ರಿ ಭೇಟಿ ನೀಡಿ ಬೆಂಬಲ ಸೂಚಿಸಿದರು.

ಶಾಸಕರ ಹೋರಾಟಕ್ಕೆ ಕೆ.ಆರ್.ನಗರ ಪತ್ರಕರ್ತರೂ ಬೆಂಬಲ ನೀಡಿದ್ದು, ಹೋರಾಟದಲ್ಲಿ ಪತ್ರಕರ್ತರು ಪಾಲ್ಗೊಂಡಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಮನವೊಲಿಕೆಗೆ ಯತ್ನ : ಜಿಲ್ಲಾಧಿಕಾರಿ ಡಿ.ರಂದೀಪ್ ಪ್ರತಿಭಟನೆಯ ನೇತೃತ್ವ ವಹಿಸಿರುವ ಶಾಸಕ ಸಾ.ರಾ ಮಹೇಶ್ ಜೊತೆ ಮಾತುಕತೆ ನಡೆಸಿದರಲ್ಲದೇ, ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಕೆಗೆ ಮುಂದಾದರು.
ಆದರೆ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಅನುವಾಗುವಂತೆ ಮೊದಲು ನಾಲೆಗಳಿಗೆ ನೀರು ಹರಿಸುವಂತೆ ಶಾಸಕ ಸಾ.ರಾ ಮಹೇಶ್ ಆಗ್ರಹಿಸಿದರು.
ಶಾಸಕ ಸಾ.ರಾ ಮಹೇಶ್ ಮತ್ತು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ನಡುವಿನ ಮಾತುಕತೆ ವಿಫಲಗೊಂಡಿದ್ದು, ಕಾಡಾ ಕಚೇರಿ ಆವರಣದಲ್ಲಿ ಸತತ ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಪ್ರತಿಭಟನೆ ಮುಂದುವರಿದಿದೆ.
ನಾಳೆ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ನಾಲೆಗಳಿಗೆ ನೀರು ಬಿಡುವ ಕುರಿತು ನಿರ್ಧಾರ ಕೈಗೊಳ್ಳುವ ಬಗ್ಗೆ ಡಿ. ರಂದೀಪ್ ಭರವಸೆ ನೀಡಿದರು.
ನಾಳೆ ರಾಜ್ಯ ಸರ್ಕಾರ ಕೈಗೊಳ್ಳುವ ನಿಲುವಿನ ನಂತರ ಮುಂದಿನ ಹಂತದ ಹೋರಾಟ ರೂಪಿಸಲು ಶಾಸಕ ಸಾ.ರಾ ಮಹೇಶ್ ನಿರ್ಧರಿಸಿದ್ದಾರೆ.












Click it and Unblock the Notifications