Mysuru: ಬಿಜೆಪಿ ಸಂಸದನನ್ನು ರಕ್ಷಿಸುತ್ತಿದೆ: ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ, ಆಕ್ರೋಶ
ಮೈಸೂರು, ಮೇ 30: ದೇಶದ ಹೆಮ್ಮೆಯ ಕುಸ್ತಿಪಟುಗಳ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸಿರುವ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿವೆ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಿಜೆಪಿ ಸಂಸದನನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಆಗ್ರಹಿಸಿದರು.
ಜಿಲ್ಲೆಯ ಹುಣಸೂರಿನ ಸಂವಿಧಾನ ಸರ್ಕಲ್‌ನಲ್ಲಿ ಸಮಾವೇಶಗೊಂಡ ಡಿಎಸ್‌ಎಸ್, ರಾಜ್ಯ ರೈತ ಸಂಘ, ಡಿಎಚ್ಎಸ್ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು. ಕುಸ್ತಿಪಟುಗಳ ಮೇಲೆ ಲೈಂಗಿನ ದೌರ್ಜನ್ಯ ನಡೆಸಿರುವ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ಸಿಂಗ್ ಬಂಧಿಸಬೇಕು ಎಂದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದರೂ ಸ್ಪಂದಿಸದ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ಮುಖಂಡರು ಖಂಡಿಸಿದರು.

ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡ ಬಸವರಾಜು ಕಲ್ಕುಣಿಕೆ ಅವರು, ಒಲಂಪಿಕ್ ಪದಕ ವಿಜೇತರು, ವಿಶ್ವಚಾಂಪಿಯನ್ ಕುಸ್ತಿಪಟುಗಳು ದೇಶದ ಹೆಮ್ಮೆ, ಇವರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಿ ವಿರುದ್ಧ ಕ್ರಮಕ್ಕೆ ತಿಂಗಳಿನಿಂದ ನವದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತಿದ್ದಾರೆ. ಆದರೂ ಇದರ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ನ್ಯಾಯಯುತ ಬೇಡಿಕೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪೊಲೀಸರಿಗೆ ದೂರು ನೀಡಿದ್ದರೂ ಸಹ FIR ದಾಖಲಾಗಿರಲಿಲ್ಲ. ಸುಪ್ರೀಂ ಕೋರ್ಟ್‌ನ ಮಧ್ಯ ಪ್ರವೇಶದ ನಂತರವಷ್ಟೇ FIR ದಾಖಲಿಸಲಾಗಿದೆ. ಹೀಗಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಕುಸ್ತಿಪಟುಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ನಾಚೀಕೆಗೇಡಿನ ಸಂಗತಿ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಆರೋಪಿ ಸಂಸದನನ್ನು ಬಿಜೆಪಿ ರಕ್ಷಿಸುತ್ತಿದೆ: ಆಕ್ರೋಶ
ನವ ನಿರ್ಮಾಣ ವೇದಿಕೆಯ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿ, ಭಾರತ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತವರ ಸಿಬ್ಬಂದಿಗಳು ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿದಂತೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವುದು ಅತ್ಯಂತ ಆಘಾತಕಾರಿ ವಿಚಾರ. ಈ ಘಟನೆಯಿಂದ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ ಅವರು, ಆರೋಪಿ ಸಂಸದನನ್ನು ಬಿಜೆಪಿ ರಕ್ಷಿಸುತ್ತಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ತಪ್ಪಿತಸ್ಥರ ವಿರುದ್ದ ಕ್ರಮವಾಗದಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಸಿದರು. ರೈತಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ, ಸಿಪಿಎಂ ಕಾರ್ಯದರ್ಶಿ ಬೆಳ್ತೂರು ವೆಂಕಟೇಶ್ ಸರ್ಕಾರದ ನಡೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಕಿರಿಜಾಜಿಧನಂಜಯ, ಮಣಿ, ಬಸವರಾಜು, ಖಾಲಿದ್, ಆಲಿ, ರಾಮೇಗೌಡ, ಸತೀಶ್, ವಿಜಯ್, ದಸಂಸ ಮುಖಂಡರಾದ ಶಿವರಾಜು, ಪ್ರಕಾಶ್, ರಾಜುಚಿಕ್ಕಹುಣಸೂರು. ಕಾಂತರಾಜು, ವೆಂಕಟೇಶ್, ಚೆಲುವರಾಜು, ಡಿಎಚ್‌ಎಸ್ ಮುಖಂಡರಾದ ಮಲ್ಲೇಶ್, ಮಹದೇವು, ಶಿವರಾಮು, ಜಗದೀಶ್, ದರ್ಶನ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.












Click it and Unblock the Notifications