ಮೈಸೂರಿನ ಹಲವೆಡೆ ಡಾ. ರಾಜ್ ಸ್ಮರಣೆ:ಅಣ್ಣಾವ್ರನ್ನು ನೆನೆದ ಯದುವೀರ್
ಮೈಸೂರು, ಏಪ್ರಿಲ್ 24:ವರ ನಟ ಡಾ.ರಾಜ್ ಕುಮಾರ್ ಹುಟ್ಟುಹುಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹಲವು ಸಂಘ -ಸಂಸ್ಥೆಗಳು ಹಾಗೂ ಗಣ್ಯರು ಶುಭಕೋರುತ್ತಿದ್ದಾರೆ. ಇದರೊಟ್ಟಿಗೆ ಡಾ. ರಾಜ್ ರ ಹಳೆ ಚಿತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ರಾಜವಂಶಸ್ಥ ಯದುವೀರ್ ಶುಭಾಶಯ ತಿಳಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಾತ ಜಯಚಾಮರಾಜ ಒಡೆಯರ್ ಅವರು ಡಾ.ರಾಜ್ ಸನ್ಮಾನಿಸುತ್ತಿರುವ ಫೋಟೋ ಹಾಕುವ ಮೂಲಕ ಹಳೆಯ ನೆನಪು ಮೆಲಕು ಹಾಕಿದ್ದಾರೆ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್. ಇದೇ ವೇಳೆ ನಟ ಸಾರ್ವಭೌಮ, ಕನ್ನಡ ಚಿತ್ರ ರಂಗದ ಧ್ರುವತಾರೆ ಎಂದು ಯದುವೀರ್ ಪೋಸ್ಟ್ ಮಾಡಿದ್ದಾರೆ.

"ಕನ್ನಡ ಚಲನಚಿತ್ರರಂಗದ ಮೇರು ನಟ, ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ 90ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ. ಡಾ. ರಾಜ್ ಕುಮಾರ್ ಅವರು ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರವರಿಂದ ಗೌರವಿಸಲ್ಪಡುತ್ತಿರುವುದು" ಎಂದು ಬರೆದು ತಿಳಿಸಿದ್ದಾರೆ.

ಡಾ. ರಾಜ್ ಸ್ಮರಣೆ
ಇಂದು ರಾಜ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಜಿಲ್ಲಾಡಳಿತದ ವತಿಯಿಂದ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿಕ ರಾಜ್ ಕುಮಾರ್ ಪಾರ್ಕ್ ನಲ್ಲಿ ಮೈಸೂರು ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಇನ್ನು ಡಾ.ರಾಜ್ ಅವರ ನೂರಾರು ಅಭಿಮಾನಿಗಳು ಬೆಳಗ್ಗೆಯಿಂದಲೂ ಡಾ.ರಾಜ್ ಪ್ರತಿಮೆ ಬಳಿ ಆಗಮಿಸಿ ಪುಷ್ಪಾರ್ಚನೆ ಮಾಡುತ್ತಿದ್ದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.












Click it and Unblock the Notifications