Mysuru Dasara Exhibition 2023: 2024ರವರೆಗೂ ಮೈಸೂರು ದಸರಾ ವಸ್ತುಪ್ರದರ್ಶನ, ಈ ಬಾರಿಯ ವಿಶೇಷತೆ ಏನು?
ಮೈಸೂರು, ಅಕ್ಟೋಬರ್, 16: ಮೈಸೂರು ದಸರಾ ಆಕರ್ಷಣೆಯಲ್ಲಿ ಒಂದಾಗ ದಸರಾ ವಸ್ತುಪ್ರದರ್ಶನ ದಸರಾ ಕಳೆದರೂ ದಸರಾ ಕಳೆ ನಗರದಲ್ಲಿ ಉಳಿಯುವಂತೆ ಮಾಡುತ್ತದೆ. ಸಂಜೆ ವೇಳೆಗೆ ನಗರದ ಜನರೆಲ್ಲರೂ ವಸ್ತು ಪ್ರದರ್ಶನಕ್ಕೆ ತೆರಳಿ ಖುಷಿಯಾಗಿ ಕಾಲ ಕಳೆಯಲು ತಮಗೆ ಬೇಕಾದ ತಿನಿಸುಗಳನ್ನು ಸವಿದು, ಆಟ ಆಡಿ, ವಸ್ತುಗಳನ್ನು ಖರೀದಿಸಿಕೊಂಡು ಬರುವುದು ದಸರಾ ವಸ್ತುಪ್ರದರ್ಶನದ ವಿಶೇಷವಾಗಿದೆ.
ಈ ಬಾರಿ ದಸರಾ ವಸ್ತುಪ್ರದರ್ಶನವು ಮೂರು ತಿಂಗಳ ಕಾಲ ನಡೆಯಲಿದ್ದು, ಈ ವಸ್ತುಪ್ರದರ್ಶನಕ್ಕೆ ದಸರಾ ಆರಂಭದ ದಿನವಾದ ಭಾನುವಾರವೇ ಚಾಲನೆ ದೊರೆತಿದೆ. ಸಂಜೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದ್ದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ವಾರ್ತಾ ಇಲಾಖೆ ಸೇರಿದಂತೆ ನಾಲ್ಕು ಮಳಿಗೆಗಳನ್ನು ಉದ್ಘಾಟಿಸಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿದ್ದಾರೆ.

ಇನ್ನು 90 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ನಡೆಯಲಿದ್ದು, ಮೈಸೂರು ನಗರ ಸೇರಿದಂತೆ ಸುತ್ತಲಿನ ಜನರು ತೆರಳಲು ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ವಸ್ತು ಪ್ರದರ್ಶನದಲ್ಲಿ ಹಲವು ಮಳಿಗೆಗಳು ಜನರನ್ನು ಆಕರ್ಷಿಸಲು ಸಿದ್ದವಾಗಿವೆ. ದೂರದಿಂದ ಆಗಮಿಸಿದ ಪ್ರವಾಸಿಗರು ಎಲ್ಲೆಡೆ ಸುತ್ತಾಡಿ ಸಂಜೆ ಹೊತ್ತಿಗೆ ವಸ್ತು ಪ್ರದರ್ಶನಕ್ಕೆ ತೆರಳಿ ಭರಪೂರ ಮನರಂಜನೆ ಪಡೆದು ಭರ್ಜರಿ ಶಾಪಿಂಗ್ ನಡೆಸುವುದರೊಂದಿಗೆ ವೈವಿಧ್ಯಮಯ ಆಹಾರ ತಿನಿಸುಗಳ ಸವಿ ಸವಿಯಲು ಅನುಕೂಲ ಮಾಡಿಕೊಡಲಾಗಿದೆ.
ವಸ್ತುಪ್ರದರ್ಶನದ ವಿಶೇಷತೆಗಳೇನು?
ಇನ್ನು ವಸ್ತು ಪ್ರದರ್ಶನದಲ್ಲಿ ಏನೇನು ವಿಶೇಷತೆಯಿದೆ ಎನ್ನುವುದನ್ನು ನೋಡುವುದಾದರೆ, ಐ ಲವ್ ಮೈಸೂರು ದಸರಾ ಎಕ್ಸ್ಪೋ ಸೆಲ್ಪಿ ಪಾಯಿಂಟ್ ಅನ್ನು ವಸ್ತು ಪ್ರದರ್ಶನದ ಪ್ರವೇಶ ದ್ವಾರದಲ್ಲಿ ನಿರ್ಮಿಸುವ ಮೂಲಕ ಪ್ರವಾಸಿಗರ ಆಕರ್ಷಿಸಲಾಗುತ್ತಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮೈಸೂರು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
ವಸ್ತು ಪ್ರದರ್ಶನಕ್ಕೆ ಬರುವ ಪ್ರವಾಸಿಗರ ಲಗೇಜ್‌ಗಳನ್ನು ಪ್ರತ್ಯೇಕವಾಗಿ ಇರಿಸಲು ಪ್ರಾಧಿಕಾರದಿಂದ ರೈಲ್ವೆ ನಿಲ್ದಾಣದಲ್ಲಿ ಲಗೇಜ್ ರೂಂ ನಿರ್ಮಿಸಿರುವಂತೆ ವಸ್ತು ಪ್ರದರ್ಶನ ಆವರಣದಲ್ಲಿ ಲಗೇಜ್ ರೂಂ ನಿರ್ಮಿಸಲಾಗಿದೆ. ಜೊತೆಗೆ ಪ್ರದರ್ಶನದ ಆವರಣಕ್ಕೆ ಬರಲು ಆವರಣದ ಮುಂದಿರುವ ಅಂಡರ್ ಪಾಸ್ ಸಹ ಬಳಕೆಗೆ ಮುಕ್ತಗೊಳಿಸಲಾಗಿದೆ.
ಅಪ್ಪುವಿನ ಮರಳು ಕಲಾಕೃತಿ
ದಸರಾ ವಸ್ತು ಪ್ರದರ್ಶನದ ಆವರಣದಲ್ಲಿರುವ ಅಪ್ಪುವಿನ ಮರಳು ಕಲಾಕೃತಿಗೆ ಬಣ್ಣದ ಸ್ಪರ್ಶ ನೀಡಲಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ರಂಗದ ಹಾದಿಯಲ್ಲಿನ 5 ಮರಳು ಶಿಲ್ಪಕಲಾಕೃತಿಗಳೊಂದಿಗೆ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ ಕಲಾಕೃತಿಗಳನ್ನು ಮೈಸೂರಿನ ಮರಳು ಶಿಲ್ಪ ಕಲಾವಿದೆ ಎಂ.ಗೌರಿ ರಚಿಸಿದ್ದು, ಈ ಬಾರಿ ಆ ಕಲಾಕೃತಿಗಳಿಗೆ ಬಣ್ಣದ ಲೇಪನ ನೀಡಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಾದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ ಮತ್ತು ನಿರುದ್ಯೋಗ ಭತ್ಯೆಯ ಯುವ ನಿಧಿ ಯೋಜನೆಗಳು ಈಗಾಗಲೇ ಮರಳಿನಲ್ಲಿ ಅರಳಿದ್ದು, ಬಣ್ಣದ ಲೇಪನ ಮಾಡಲಾಗಿದೆ. ಜೊತೆಗೆ ಚಂದ್ರಯಾನ-3ರ ವಿಕ್ರಮ್, ಪ್ರಗ್ಯಾನ್ ರೋವರ್ ಮರಳಿನ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಚಿಣ್ಣರನ್ನು ಆಕರ್ಷಿಸಲು ವಿಶೇಷವಾದ ಆಟಿಕೆಗಳನ್ನು ಇದೇ ಮೊದಲ ಬಾರಿಗೆ ತರಿಸಿ ವಿಶೇಷವಾಗಿ ಅಮ್ಯೂಸ್‌ಮೆಂಟ್ ನಿರ್ಮಿಸಲಾಗಿದೆ.
ಈಗಾಗಲೇ ವಸ್ತುಪ್ರದರ್ಶನಕ್ಕೆ ಜನರು ಹೆಚ್ಚಿನ ಪ್ರಮಾಣದಲ್ಲಿ ದೌಡಾಯಿಸುತ್ತಿದ್ದು, ಜನ ಖುಷಿ ಖುಷಿಯಾಗಿ ತೆರಳುತ್ತಿದ್ದಾರೆ. ದಸರಾ ಮಾತ್ರವಲ್ಲದೆ, ದಸರಾ ಕಳೆದ ಬಳಿಕವೂ ಜನರು ಇಲ್ಲಿಗೆ ಆಗಮಿಸುವುದರಿಂದ ದಸರಾ ಕಳೆ ಹೊಸವರ್ಷದವರೆಗೂ ಉಳಿಯಲಿದೆ.












Click it and Unblock the Notifications