ವಿಶೇಷ ಬಾಲ ಪ್ರತಿಭೆಯಿಂದ ಮಕ್ಕಳ ದಸರಾ ಉದ್ಘಾಟನೆ: ಈ ಬಾಲಕ ಯಾರು? ಹಿನ್ನೆಲೆ ಏನು?
ಮೈಸೂರು, ಸೆಪ್ಟೆಂಬರ್ 21: ಮೈಸೂರು ನಗರದ ಪೂರ್ಣ ಚೇತನ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ, ಮಾಸ್ಟರ್ ಎಚ್ ಎಸ್ ಮಹೇಶ್ ಕುಮಾರ್ ಈ ಬಾರಿಯ ಮಕ್ಕಳ ದಸರಾ ಉದ್ಘಾಟನಾ ಸಮಾರಂಭದ ವಿಶೇಷ ಆಹ್ವಾನಿತ ಬಾಲ ಪ್ರತಿಭೆ ಮುಖ್ಯ ಅತಿಥಿಯಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ದಸರಾ ಉಪಸಮಿತಿಗಳ ಕ್ರಿಯಾ ಯೋಜನಾ ಪರಿಶೀಲನಾ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಐತಿಹಾಸಿಕ ಮೈಸೂರು ದಸರಾ ಪ್ರಯುಕ್ತ ಅಕ್ಟೋಬರ್ 6 ರಂದು ಬೆಳಗ್ಗೆ ಕಲಾ ಮಂದಿರದಲ್ಲಿ ಮಕ್ಕಳ ದಸರಾದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಈ ಸಮಾರಂಭದ ಉದ್ಘಾಟನೆ ನೆರವೇರಿಸುವ ಮೂಲಕ ಬಾಲಪ್ರತಿಭೆ ಮಹೇಶ್ ಕುಮಾರ್ ಗಮನಸೆಳೆಯಲಿದ್ದಾರೆ. ಇನ್ನು ಬಾಲಪ್ರತಿಭೆ ಮಹೇಶ್ ಕುಮಾರ್ ಬಗ್ಗೆ ಹೇಳಬೇಕೆಂದರೆ, ಇವರು ಪ್ರಸ್ತುತ ಪೂರ್ಣ ಚೇತನ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪ್ರತಿಭೆ ದಾಖಲೆಗಳ ವೀರ ಎಂದರೆ ತಪ್ಪಾಗಲಾರದು.

ಇನ್ನು ಇವರ ಸಾಧನೆಯನ್ನು ನೋಡಿದ್ದೇ ಆದರೆ, ಜುಲೈ 27ರಂದು ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್ ನವರು ನಡೆಸಿದಂತಹ ವಿಶ್ವ ದಾಖಲೆಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾಗವಹಿಸಿ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನ, ಅವರ ಸಾಧನೆ ಮತ್ತು ಇಡೀ ಜಗತ್ತಿಗೆ ಅವರ ಕೊಡುಗೆಗಳ ಬಗ್ಗೆ ಸತತ 14 ಗಂಟೆ 2 ನಿಮಿಷಗಳ ಕಾಲ ಮಾತನಾಡಿ ಚಿಕ್ಕವಯಸಿಗೆ ವಿಶ್ವ ದಾಖಲೆಯನ್ನು ಮಾಡಿರುವುದು ವಿಶೇಷ.
ರೈತಾಪಿ ಕುಟುಂಬದಿಂದ ಬಂದ ಪ್ರತಿಭೆ
ಮೂಲತಃ ಮೈಸೂರು ಜಿಲ್ಲೆಯ ಬನ್ನೂರು ಬಳಿ ಇರುವ ಹನುಮನಾಳು ಎಂಬ ಪುಟ್ಟ ಗ್ರಾಮದ ರೈತ ದಂಪತಿ ಸೋಮಶೇಖರ ಮತ್ತು ತಾಯಮ್ಮ ಮಗನಾದ ಮಹೇಶ್ ಕುಮಾರ್ ಒಂದರಿಂದ ಐದನೇ ತರಗತಿಯವರೆಗೆ ಹನುಮನಾಳಿನಲ್ಲಿ ವ್ಯಾಸಂಗ ಮಾಡಿದ್ದು, ಬಾಲ್ಯದಲ್ಲಿ ಅಪಾರ ಜ್ಞಾನಾರ್ಜನೆಯ ತುಡಿತ ಹೊಂದಿದ್ದ, ಆತನಿಗೆ ಎಳೆ ವಯಸ್ಸಿನಲ್ಲಿಯೇ ಭಾಷಣ ಕಲೆ ಸಿದ್ಧಿಸಿತ್ತು. ಆತನ ಪ್ರತಿಭೆಗೆ ನೀರೆರೆದು ಪೋಷಿಸಿದ್ದು ಮೊದಲಿಗೆ ಆತನ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ತನುಜಾ.

ಈತನ ಪ್ರತಿಭೆ ಗಮನಿಸಿದ, ಪೂರ್ಣ ಚೇತನ ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದರ್ಶನ್ ರಾಜ್ ಬಿ ಅವರು ತಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣದ ಅವಕಾಶ ಕಲ್ಪಿಸಿ, ಆತನಿಗೆ ಅಗತ್ಯವಾದ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಈ ಹನ್ನೆರಡರ ಯುವ ಪ್ರತಿಭೆ ವಿವೇಕಾನಂದರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು, ಇತರರಿಗೂ ಸಾರುವ ಗುರಿಯನ್ನು ಹೊಂದಿರುವುದಾಗಿ ಹೇಳುತ್ತಾರೆ.
ಮಹೇಶ್ ಕುಮಾರ್ ಪ್ರತಿಭೆ ಮಾದರಿ
ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬನನ್ನ ಉದ್ಘಾಟನಾ ಸಮಾರಂಭಕ್ಕೆ ಆಯ್ಕೆ ಮಾಡಿರುವ ಕರ್ನಾಟಕ ಸರಕಾರ, ಮೈಸೂರು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಗೆ ಧನ್ಯವಾದ ಸಮರ್ಪಿಸಿದ್ದು, ಬಡ ಕುಟುಂಬದ ಮಹೇಶನಿಗೆ ಅಗತ್ಯ ಬೆಂಬಲ ನೀಡುವ ಮೂಲಕ, ನಾವು ಭಾರತೀಯತೆಯ ಪರಿಕಲ್ಪನೆಗೆ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುವ ಸಣ್ಣ ಅವಕಾಶ ಪಡೆದಿದ್ದೇವೆ. ಅದಕ್ಕೆ ನಾವೆಲ್ಲರಿಗೂ ಕೃತಜ್ಞರಾಗಿದ್ದೇವೆ ಎನ್ನುತ್ತಾರೆ.
ಇನ್ನು ಈತ ಅಭ್ಯಸಿಸುತ್ತಿರುವ ಪೂರ್ಣ ಚೇತನ ಶಾಲೆಯ ಅಧ್ಯಕ್ಷ ಡಾ. ವಿದ್ಯಾಸಾಗರ್ ಅವರು ಹೇಳುವಂತೆ ಮಹೇಶನ ಸಾಧನೆ, ಉಳಿದ ವಿದ್ಯಾರ್ಥಿಗಳಿಗೂ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲು ಒಂದು ಪ್ರೇರೇಪಣೆ. ಮಹೇಶನನ್ನು ಆಯ್ಕೆ ಮಾಡುವ ಮೂಲಕ, ಇಡೀ ರಾಜ್ಯಕ್ಕೆ ವಿವೇಕಾನಂದರ ಸಂದೇಶ ತಲುಪುವಂತಾಗಿದೆ ಎಂದು ಅವರು ಹೇಳುತ್ತಾರೆ. ಆ ಮೂಲಕ ತಮ್ಮ ಸಂಸ್ಥೆಗೆ ಹೆಸರು ತಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರೆ, ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಅವರು ಶಿಕ್ಷಣದ ಮೂಲಕ ಭಾರತೀಯತೆಯ ಕಲ್ಪನೆಯನ್ನು ನಾವು ನಮ್ಮ ಶಾಲೆಯಲ್ಲಿ ಹರಡುತ್ತಿದ್ದೇವೆ ಎಂದಿದ್ದಾರೆ.












Click it and Unblock the Notifications