Mysuru Dasara Jamboo Savari 2024: 5ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು
Mysuru Dasara 2024 Jamboo Savari: ಐತಿಹಾಸಿಕ 414ನೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಈ ಒಂದು ಅಪರೂಪದ ಕ್ಷಣಗಳಿಗಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಅಭಿಮನ್ಯು ಹೊತ್ತಿದ್ದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ರಾಜಮಾರ್ಗದ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿ ಕಣ್ತುಂಬಿಸಿಕೊಂಡರು.
ಬೆಳಗ್ಗಿನಿಂದಲೇ ಸುತ್ತಮುತ್ತಲಿನ ಹಳ್ಳಿಗಳಿಂದ, ಮೊದಲೇ ನಗರಕ್ಕೆ ಬಂದು ವಾಸ್ತವ್ಯ ಹೂಡಿದ್ದ ಲಕ್ಷಾಂತರ ಮಂದಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಪಡೆದವರು ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾದರೆ, ಉಳಿದವರ ಪೈಕಿ ಕೆಲವರು ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗವನ್ನು ಆರಿಸಿಕೊಂಡು ಆಸೀನರಾದರೆ, ಮತ್ತೆ ಕೆಲವರು ಕಟ್ಟಡ ಹಾಗೂ ಮರಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ಹತ್ತಿರದಿಂದ ಮಳೆಯ ನಡುವೆ ವೀಕ್ಷಿಸಿದರು.

ಅರಮನೆ ಆವರಣದಲ್ಲಿ ಕ್ರೇನ್ ಮೂಲಕ ಅಭಿಮನ್ಯುಗೆ ಅಂಬಾರಿಯನ್ನು ಕಟ್ಟಲಾಯಿತು. ಅರಮನೆ ಮುಂಭಾಗದ ವಿಶೇಷ ವೇದಿಕೆಗೆ ಕರೆ ತಂದು ನಿಲ್ಲಿಸುತ್ತಿದ್ದಂತೆಯೇ ಗಜಪಡೆಗಳು ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವ ಸಲ್ಲಿಸಿದವು.
ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಸೇರಿದಂತೆ ಗಣ್ಯರು ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಅರಮನೆ ಆವರಣಕ್ಕೆ ಇದೇ ವೇಳೆ ಗೌರವಾರ್ಥವಾಗಿ 21 ಬಾರಿ ಕುಶಾಲತೋಪು ಸಿಡಿಸಲಾಯಿತು.
ಬಳಿಕ ಚಿನ್ನದ ಅಂಬಾರಿ ಹೊತ್ತು 5ನೇ ಬಾರಿಗೆ ಅಭಿಮನ್ಯು ಮುನ್ನಡೆದರೆ, ಆತನಿಗೆ ಲಕ್ಷ್ಮಿ, ವರಲಕ್ಷ್ಮಿ ಆನೆಗಳು ಕುಮ್ಕಿ ಆನೆಗಳಾಗಿ ಸಾಥ್ ನೀಡಿದರು. ಈ ಬಾರಿಯ ಜಂಬೂಸವಾರಿಯಲ್ಲಿ ಒಂಬತ್ತು ಆನೆಗಳು ಪಾಲ್ಗೊಂಡಿದ್ದು, ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಉಳಿದ ಆನೆಗಳು ಸಾಲು ಆನೆಗಳಾಗಿ ಸಾಗಿ ಜಂಬೂಸವಾರಿಗೆ ಮೆರಗು ತಂದವು. ಇನ್ನು ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆಗಳಿಗೆ ಅರಮನೆ ಆವರಣದ ನೀರಿನ ತೊಟ್ಟಿ ಬಳಿ ಸ್ನಾನ ಮಾಡಿಸಿ ಸಿಂಗಾರ ಮಾಡಲಾಯಿತು.
ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕಾರ್ಯ ನಡೆಯಿತು. ಹುಣಸೂರು ಮೂಲದ ಒಟ್ಟು 8 ಕಲಾವಿದರಿಂದ ದಸರಾ ಆನೆಗಳಿಗೆ ವಿಶೇಷ ಬಣ್ಣದ ಅಲಂಕಾರ ಮಾಡಲಾಯಿತು.
ಈ ವೇಳೆ ಆನೆಗಳ ಕಿವಿ ಮೇಲೆ ಶಂಖ, ಚಕ್ರ, ಸೊಂಡಿಲ ಮೇಲೆ ಗಂಡಭೇರುಂಡ, ಹೂವು, ಎಲೆ, ಬಳ್ಳಿ, ದಂತದ ಹಿಂಭಾಗ ಗಿಳಿ, ಎಲೆ, ಕೆನ್ನೆಯ ಮೇಲೆ ಹೂವು, ಬಳ್ಳಿ, ಮೊಗ್ಗು, ಎಲೆ, ಕಾಲುಗಳ ಮೇಲೆ ಪಕ್ಷಿ, ಎಲೆ, ಹೂವು, ಮೊಗ್ಗು, ಬಳ್ಳಿ, ಆನೆಗಳ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿಚಿತ್ರ ಹಾಗೂ ಹೂವು ಬಳ್ಳಿಗಳ ಅಲಂಕಾರವನ್ನು ಆನೆಯ ಕಣ್ಣಿನ ಸುತ್ತ ಎಲೆ ಆಕೃತಿ, ಹಣೆಯ ಮೇಲೆ ನಾಮ ಮತ್ತು ಸುರುಳಿ ಚಿತ್ರ ಬಿಡಿಸಿ ಸಿಂಗರಿಸಿದ್ದರು.
ಅಂಬಾರಿ ಹೊತ್ತ ಅಭಿಮನ್ಯು ಅರಮನೆಯಿಂದ ಬಲರಾಮ ದ್ವಾರದ ಮೂಲಕ ಚಾಮರಾಜ ವೃತ್ತ, ಕೃಷ್ಣರಾಜವೃತ್ತ, ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಬನ್ನಿಮಂಟಪ ತಲುಪಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ನೆರೆದಿದ್ದ ಲಕ್ಷಾಂತರ ಜನರು ಅಂಬಾರಿಯಲ್ಲಿ ವೀರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿಗೆ ನಮಿಸುತ್ತಿದ್ದ ದೃಶ್ಯ ಕಂಡು ಬಂತು. ಆ ನಂತರ ಬನ್ನಿಮಂಟಪದಲ್ಲಿ ರಾಜ್ಯಪಾಲರು ಧ್ವಜವಂದನೆ ಸ್ವೀಕರಿಸುವ ಪಂಜಿನ ಕವಾಯತಿನೊಂದಿಗೆ ಈ ಬಾರಿಯ ಮೈಸೂರು ದಸರಾದ ಜಂಬೂ ಸವಾರಿಗೆ ತೆರೆಬಿದ್ದಿದೆ.












Click it and Unblock the Notifications