Mysuru Dasara 2024: ಗಜಪಡೆಯ ಅರಮನೆ ಪ್ರವೇಶ ಹೇಗಿರಲಿದೆ ಗೊತ್ತಾ..?
ಮೈಸೂರು: ಐತಿಹಾಸಿಕ ಮೈಸೂರು ದಸರಾದಲ್ಲಿ ಕಾಡಿನಿಂದ ನಾಡಿಗೆ ಆನೆಗಳನ್ನು ಕರೆತರುವ ಗಜಪಯಣದಿಂದ ಆರಂಭವಾಗಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯನ್ನು ಮುಗಿಸಿ ಮತ್ತೆ ಕಾಡಿಗೆ ಬೀಳ್ಕೊಡುವ ತನಕ ಎಲ್ಲವೂ ಸಂಪ್ರದಾಯಬದ್ಧವಾಗಿಯೇ ನಡೆಯುತ್ತದೆ. ಈಗಾಗಲೇ ಮೊದಲ ಹಂತದ ಗಜಪಯಣವನ್ನು ಮುಗಿಸಿ ಬಂದಿರುವ ಅಭಿಮನ್ಯು ನೇತೃತ್ವದ ಗಜಪಡೆ ಅ.23ರಂದು ಶುಭ ಮುಹೂರ್ತದಲ್ಲಿ ಅರಮನೆ ಪ್ರವೇಶ ಮಾಡಲಿದ್ದು, ಅರಮನೆ ಸ್ವಾಗತಕ್ಕೆ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಈಗಾಗಲೇ ವೀರನಹೊಸಹಳ್ಳಿಯಿಂದ ಮೈಸೂರು ನಗರಕ್ಕೆ ಬಂದು ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆ ಶುಕ್ರವಾರ ಅರಮನೆ ಅಂಗಳ ಪ್ರವೇಶಿಸಲಿದ್ದು, ಇದಕ್ಕಾಗಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 10ರಿಂದ ರಿಂದ 10.30ರ ತುಲಾ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವುದರ ಮೂಲಕ ಅರಮನೆ ಅಂಗಳಕ್ಕೆ ಸ್ವಾಗತಿಸಲಾಗುತ್ತದೆ. ಈ ವೇಳೆ ಸಂಪ್ರದಾಯದಂತೆ ಪೂಜಾ ಕೈಂಕರ್ಯಗಳು ನಡೆಯಲಿವೆ. ಆನೆಗಳಿಗೆ ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ಪೂಜೆ ಸಲ್ಲಿಸಲಿದ್ದಾರೆ.

ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಏಕಲವ್ಯ, ರಾಂಪುರ ಆನೆ ಶಿಬಿರದ ರೋಹಿತ್, ದೊಡ್ಡಹರವೆ ಆನೆ ಶಿಬಿರದ ಲಕ್ಷ್ಮಿ, ವರಲಕ್ಷ್ಮಿ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ, ಗೋಪಿ, ಕಂಜನ್ ಸೇರಿ 9 ಆನೆಗಳಿಗೆ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯಿಂದ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಗುತ್ತದೆ. ನಂತರ, ಅರಮನೆ ಮುಂಭಾಗ ಪೂಜೆ ಸಲ್ಲಿಸಿದ ಬಳಿಕ ಮಾವುತರು, ಕಾವಾಡಿಗಳಿಗೆ ಅಗತ್ಯವಿರುವ ದಿನಸಿ ಇನ್ನಿತರ ವಸ್ತುಗಳಿರುವ ಕಿಟ್ಗಳನ್ನು ವಿತರಿಸಲಾಗುತ್ತದೆ.
ಅರಣ್ಯ ಭವನದಿಂದ ಆನೆಗಳ ಮೆರವಣಿಗೆ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ ಸಚಿವ ಕೆ.ವೆಂಕಟೇಶ್ ಶಾಸಕರಾದ ಟಿ.ಎಸ್.ಶ್ರೀವತ್ಸ, ತನ್ವೀರ್ಸೇಠ್, ಕೆ.ಹರೀಶ್ಗೌಡ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ ಗಜಪಡೆಗೆ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆಯಿಂದ ಬೆಳಗ್ಗೆ 7.45ಕ್ಕೆ ಪೂಜೆ ಸಲ್ಲಿಸಿ ಆನೆಗಳನ್ನು ಬೀಳ್ಕೊಡಲಾಗುತ್ತದೆ. ಬಳಿಕ ಕಾಲ್ನಡಿಗೆಯಲ್ಲಿ ಅರಮನೆಗೆ ಕರೆದೊಯ್ಯಲಾಗುತ್ತದೆ.
ಅರಣ್ಯ ಭವನದಿಂದ ಹೊರಡುವ ಆನೆಗಳು ಕಾಲ್ನಡಿಗೆಯಲ್ಲಿ ಅಶೋಕಪುರಂ ರಸ್ತೆ, ಬಲ್ಲಾಳ್ ವೃತ್ತ, ಜೆಎಲ್ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್ಹೌಸ್, ಬಿಎನ್ ರಸ್ತೆ ಮೂಲಕ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬರಲಿವೆ. ಗಜಪಡೆ ಸಾಗುವ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ.

ಸಾವಿರಾರು ಜನರಿಂದ ವೀಕ್ಷಣೆ
ಅಶೋಕಪುರಂನ ಅರಣ್ಯ ಭವನದ ಆವರಣ ಗುರುವಾರ ಅಕ್ಷರಶಃ ಪ್ರವಾಸಿ ತಾಣವಾಗಿ ಮಾರ್ಪಟಿತ್ತು. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗಜಪಡೆ ವೀಕ್ಷಿಸಲು ಹಿರಿಯರು-ಕಿರಿಯರು ಎನ್ನದೆ ಸಾವಿರಾರು ಜನರು ಭೇಟಿ ನೀಡಿದ್ದರು. ಚಿಣ್ಣರ ಸಂಭ್ರಮವಂತೂ ಮುಗಿಲು ಮುಟ್ಟಿತ್ತು. ಅರಣ್ಯ ಭವನದ ಗೇಟ್ನಲ್ಲಿ ಸಾರ್ವಜನಿಕರನ್ನು ತಡೆಯುತ್ತಿದ್ದರೂ ಅನ್ಯ ಮಾರ್ಗದಿಂದ ಒಳ ಬಂದು ಆನೆಗಳನ್ನು ವೀಕ್ಷಿಸಿದರು.
ಕ್ಯಾಪ್ಟನ್ ಅಭಿಮನ್ಯು, ಹೊಸ ಆನೆ ಏಕಲವ್ಯ, ಕುಮ್ಕಿ ಆನೆಗಳಾದ ವರಲಕ್ಷ್ಮೀ, ಲಕ್ಷ್ಮೀ, ಇತರೆ ಗಂಡಾನೆಗಳಾದ ಭೀಮ, ಗೋಪಿ, ಧನಂಜಯ, ಕಂಜನ್, ರೋಹಿತ ಒಳಗೊಂಡ ಗಜಪಡೆಯನ್ನು ಹತ್ತಿರದಿಂದ ನೋಡಿ ಖುಷಿ ಪಟ್ಟರಲ್ಲದೆ, ತಮ್ಮ ಮೊಬೈಲ್ಗಳಲ್ಲಿ ಆನೆಗಳ ಚಿತ್ರ ಸೆರೆ ಹಿಡಿಯುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.












Click it and Unblock the Notifications