ಜೋಡಿಕಟ್ಟುವುದರೊಂದಿಗೆ ತೆರೆದುಕೊಂಡ ದಸರಾ ಕುಸ್ತಿ ಅಖಾಡ: ಈ ಬಾರಿ ಹೊಸ ಬದಲಾವಣೆ
ಮೈಸೂರು, ಸೆಪ್ಟೆಂಬರ್ 23: ಮೈಸೂರಿನಲ್ಲಿ ದಸರಾ ಸಡಗರ ಕಾಣಿಸುತ್ತಿದ್ದು, ಅದರ ಜೊತೆ ಜೊತೆಯಲ್ಲಿಯೇ ದಸರಾ ಸಂಬಂಧಿಸಿದಂತೆ ಕಾರ್ಯಕ್ರಮಗಳಿಗೂ ಚಾಲನೆ ಸಿಗುತ್ತಿದೆ. ಈ ಪೈಕಿ ದಸರಾದಲ್ಲಿ ಮಹತ್ವದ ಸ್ಥಾನ ಪಡೆದಿರುವ ಕುಸ್ತಿ ಪಂದ್ಯಾವಳಿಗೆ ಈಗಾಗಲೇ ಜೋಡಿಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕುಸ್ತಿ ಪಂದ್ಯಾವಳಿಗೆ ಈ ಬಾರಿ ಒಂದಷ್ಟು ಹೊಸತನ ನೀಡುವ ಪ್ರಯತ್ನವನ್ನು ಮಾಡಲಾಗಿದೆ.
ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಮೈಸೂರು ಹೊರತುಪಡಿಸಿ ಹೊರಗಿನವರಿಗೆ ಹೆಚ್ಚಿನ ಆದ್ಯತೆ ನೀಡಿ ಸ್ಥಳೀಯ ಕುಸ್ತಿಪಟುಗಳಿಗೆ ಮಣೆ ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದನ್ನು ತೆಗೆದು ಹಾಕುವ ಸಲುವಾಗಿ ಮತ್ತು ಯುವಕರನ್ನು ಕುಸ್ತಿಯತ್ತ ಸೆಳೆಯಲು ಅನುಕೂಲವಾಗುವಂತೆ ಈ ಬಾರಿಯ ದಸರಾ ಕುಸ್ತಿಯಲ್ಲಿ 17ರಿಂದ18 ವಯೋಮಿತಿ ವಿಭಾಗವನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ನಾಡಕುಸ್ತಿ, ಪಾಯಿಂಟ್ ಕುಸ್ತಿ, ಪಂಜಾ ಕುಸ್ತಿಯನ್ನು ಏರ್ಪಡಿಸಲಾಗಿರುವುದು ವಿಶೇಷವಾಗಿದೆ.

ಇದೀಗ ಜೋಡಿಗಳನ್ನು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅದರಂತೆ ಪುರುಷ ವಿಭಾಗದಲ್ಲಿ ರತನ್ ಆಲನಹಳ್ಳಿ-ಕಿರಣ್ ಗೌಡ ಕನಕಪುರ, ಮಹಿಳಾ ವಿಭಾಗದಲ್ಲಿ ಮರಿಯಾ ಜೆನ್ನಿಫರ್ ಮೈಸೂರು- ಶ್ರೀರಕ್ಷಾ ಕನಕಪುರ ಮಕ್ಕಳ ವಿಭಾಗದಲ್ಲಿ ಯಕ್ಷಿತ್ ಮಳವಳ್ಳಿ- ವಾಗೇಶ್ ಮೈಸೂರು, 17-18 ವರ್ಷದ ವಿಭಾಗದಲ್ಲಿ ಜಹೀರ್- ಮನೋಜ್ ಜೋಡಿಯನ್ನು ಕಟ್ಟಲಾಗಿದೆ.
ಇನ್ನು ಕುಸ್ತಿ ಕುರಿತಂತೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು 'ನಾಡಕುಸ್ತಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆಯಾಗಲು ಗರಡಿಮನೆಗಳ ಪುನಶ್ಚೇತನ ಅವಶ್ಯವಾಗಬೇಕಿದೆ. ಮೈಸೂರು ಮಹಾರಾಜರು ಕುಸ್ತಿ ಯನ್ನು ಪ್ರೊತ್ಸಾಹ ಮಾಡಿದ್ದರಿಂದ ಹಳೇ ಮೈಸೂರು ಭಾಗದಲ್ಲಿ ಜಗಜಟ್ಟಿ ಫೈಲ್ವಾನರು ಬೆಳಕಿಗೆ ಬಂದರು. ರುದ್ರ ಮೂಗ, ಬಾಲಾಜಿ, ಉರಿಬತ್ತಿ ನಂಜಯ್ಯ, ದಿಲ್ದಾರ್ ರಿಯಾಜ್ ಮುಂತಾದವರು ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರು. ಆದರೆ ಇತ್ತೀಚೆಗೆ ಕುಸ್ತಿಪಟುಗಳು ಕಡಿಮೆ ಯಾಗುತ್ತಿದ್ದಾರೆ. ಇದರತ್ತ ಆಸಕ್ತಿ ಕ್ಷೀಣಿಸುತ್ತಿದೆ ಎಂದರು.
ಆದ್ದರಿಂದ ಕುಸ್ತಿಯನ್ನು ಕಲಿಯುವ ಮೂಲ ಕೇಂದ್ರವಾದ ಗರಡಿ ಮನೆಗಳನ್ನು ಸದೃಢ ಗೊಳಿಸಿ, ಅಲ್ಲಿ ನುರಿತ ತರಬೇತುದಾರರನ್ನು ನೇಮಕ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಲಿದೆ. ಎಲ್ಲರನ್ನೂ ಒಂದು ಮಾಡುವ, ಎಲ್ಲರ ಮನಸ್ಸನ್ನು ಬೆಸೆಯುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ಅದಕ್ಕಾಗಿಯೇ ಯಾವುದಾದರೂ ಘಟನೆಗಳು ಜರುಗಿದರೆ ಕ್ರೀಡಾ ಮನೋಭಾವನೆಯಿಂದ ಸ್ವೀಕಾರ ಮಾಡಬೇಕು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗಿದೆ. ಆದ್ದರಿಂದ ಕುಸ್ತಿಯಲ್ಲಿ ಭಾಗವಹಿಸುವ ಪೈಲ್ವಾನ್‌ರು ಸೋಲು ಗೆಲುವು ಪಕ್ಕಕ್ಕೆ ಸರಿಸಿ ಕ್ರೀಡೆಯು ಮೆರೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, 'ಕುಸ್ತಿ ಕ್ರೀಡಾಪಟುಗಳು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಲು ರೆಸಿಡೆನ್ಸಿಯಲ್ ಶಾಲೆಯ ಅವಶ್ಯಕತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಕುಸ್ತಿಯ ಬಗ್ಗೆ ಬಹಳ ಆಸಕ್ತಿ ಹೊಂದಿರುವುದರಿಂದ ಸರ್ಕಾರದ ಮಟ್ಟದಲ್ಲಿ ಈ ಕಾರ್ಯವನ್ನು ಬಹಳ ಮುತುವರ್ಜಿ ವಹಿಸಿ ಮಾಡಿಸಿಕೊಡಬೇಕು' ಎಂದು ಮನವಿ ಮಾಡಿದ್ದಾರೆ.
ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಎಎಸ್‌ಪಿ ನಾಗೇಶ್ ಮಾತನಾಡಿ 'ಈ ಸಲದ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊರಗಿನ ಕುಸ್ತಿಪಟುಗಳಿಗೆ ಹೆಚ್ಚು ಅವಕಾಶವನ್ನು ನೀಡಿ, ಸ್ಥಳೀಯರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಕುಸ್ತಿಗೆ ಪ್ರಾಮುಖ್ಯತೆ ಕಡಿಮೆಯಾಗುತ್ತದೆ ಎನ್ನುವ ದೂರುಗಳು ಕೇಳಿಬರುತ್ತಿದ್ದವು. ಆದ್ದರಿಂದ ಸ್ಥಳೀಯ ಕುಸ್ತಿಪಟುಗಳಿಗೆ ಮಣೆ ಹಾಕಲಾಗಿದೆ' ಎಂದು ತಿಳಿಸಿದ್ದಾರೆ.












Click it and Unblock the Notifications