Mysuru Dasara 2023: ನಾಳೆಯಿಂದ ಗಜಪಡೆಗೆ ಭಾರ ಹೊರುವ ತಾಲೀಮು ಆರಂಭ
ಮೈಸೂರು, ಸೆಪ್ಟೆಂಬರ್ 14: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ ಗಜಪಡೆ ಈಗಾಗಲೇ ತಾಲೀಮು ಆರಂಭಿಸಿದ್ದು, ಸೆ.15(ಶುಕ್ರವಾರ)ರಿಂದ ಭಾರ ಹೊರುವ ತಾಲೀಮು ನಡೆಯಲಿದೆ. ಮುಂದಿನ ದಿನಗಳಲ್ಲಿ ಗಜಪಡೆಯ ತಾಲೀಮು ಕಠಿಣವಾಗುತ್ತಾ ಹೋಗಲಿದ್ದು, ಅಂತಿಮವಾಗಿ ಮರದ ಅಂಬಾರಿ ಹೊರುವುದರೊಂದಿಗೆ ದಸರಾ ಜಂಬೂ ಸವಾರಿಗೆ ಗಜಪಡೆ ತಯಾರಾಗಲಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ 14 ಆನೆಗಳ ಪೈಕಿ ಈಗಾಗಲೇ ಮೊದಲ ತಂಡದಲ್ಲಿ ಅರಮನೆ ಆವರಣ ಪ್ರವೇಶಿಸಿರುವ ಅಭಿಮನ್ಯು, ಅರ್ಜುನ, ಕಂಜನ್, ವರಲಕ್ಷ್ಮೀ, ವಿಜಯ, ಭೀಮ, ಗೋಪಿ, ಧನಂಜಯ, ಮಹೇಂದ್ರ ಆನೆಗಳ ತಂಡಗಳ ಪೈಕಿ ಅರ್ಜುನ ಹೊರತು ಪಡಿಸಿ ಉಳಿದೆಲ್ಲ ಆನೆಗಳು ಈಗಾಗಲೇ ತಾಲೀಮು ನಡೆಸಿವೆ. ಆದರೆ ಅರ್ಜುನ ಆನೆ ಹುಲಿ ಕಾರ್ಯಾಚರಣೆಗೆ ತೆರಳಿದ್ದರಿಂದ ಗುರುವಾರ ಮತ್ತೆ ಗಜಪಡೆಯನ್ನು ಸೇರಿಕೊಂಡಿದೆ. ಅಮವಾಸ್ಯೆ ಕಾರಣ ಗುರುವಾರ ತಾಲೀಮಿಗೆ ವಿರಾಮ ನೀಡಲಾಗಿದೆ.

ಸೆ.15(ಶುಕ್ರವಾರ)ರಿಂದ ಗಜಪಡೆಯ ತಾಲೀಮಿನಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಭಾರ ಹೊರುವ ತಾಲೀಮನ್ನು ಆರಂಭಿಸಲಾಗುತ್ತಿದೆ. ಅಲ್ಲದೆ ದಿನ ಕಳೆದಂತೆ ತಾಲೀಮು ಕಠಿಣವಾಗಲಿದ್ದು, ಎರಡನೇ ತಂಡದಲ್ಲಿರುವ ಪ್ರಶಾಂತ, ಸುಗ್ರೀವ, ರೋಹಿತ್, ಹಿರಣ್ಯಾ ಹಾಗೂ ಲಕ್ಷ್ಮೀ ಮುಂದಿನ ದಿನಗಳಲ್ಲಿ ಅರಮನೆ ಅಂಗಳಕ್ಕೆ ಆಗಮಿಸಲಿದ್ದು ಅವು ಗಜಪಡೆಯನ್ನು ಸೇರಿಕೊಂಡು ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ.
ಗಜಪಡೆ ಮೇಲೆ ವಿಶೇಷ ನಿಗಾ
ಈಗಾಗಲೇ ಗಜಪಡೆಗೆ ಪ್ರತಿದಿನ ಎರಡು ಬಾರಿ ತಾಲೀಮು ನಡೆಸಲಾಗುತ್ತಿದ್ದು, ಆನೆಗಳ ಭಾರದ ಅನುಸಾರವಾಗಿ ವೈದ್ಯರು ಸೂಚಿಸಿದಂತೆ ಹಸಿ-ಒಣ ಹುಲ್ಲು, ಕಬ್ಬು, ಬೆಲ್ಲ, ತೆಂಗಿನಕಾಯಿ, ಹುರುಳಿ, ಬೆಣ್ಣೆಯಂತಹ ಬಗೆಬಗೆಯ ವಿಶೇಷ ಆಹಾರವನ್ನು ನೀಡಲಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಆನೆಗಳಿಗೆ ಬನ್ನಿಮಂಟಪದವರೆಗೂ ತಾಲೀಮು ಮಾಡಿಸಲಾಗುತ್ತಿದೆ. ಉಳಿದ ದಿನ ಆರ್‌ಎಂಸಿ ವೃತ್ತದ ವರೆಗೆ ತಾಲೀಮು ನಡೆಸಲಾಗುತ್ತಿದೆ. ಸೆ.15ರಿಂದ ಆನೆಗಳ ಮೇಲೆ ಭಾರ ಹಾಕಿ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯುವಿನಿಂದ ಭಾರದ ತಾಲೀಮು ಶುರು ಮಾಡಲಾಗುತ್ತಿದ್ದು, ಈ ಭಾರದ ತಾಲೀಮನ್ನು ಒಟ್ಟು ನಾಲ್ಕು ಆನೆಗಳಿಗೆ ನಡೆಸುವ ಸಾಧ್ಯತೆ ಇದೆ.

ಎರಡನೇ ಹಂತದ ಆನೆಗಳು ಸೆಪ್ಟೆಂಬರ್ ಕೊನೆವಾರದಲ್ಲಿ ಬರಲಿದ್ದು, ಅವುಗಳಿಗೂ ತಾಲೀಮು ನಡೆಯಲಿದೆ. ಆದರೆ ಈ ಆನೆಗಳ ಪೈಕಿ ನಿಶಾನೆ ಆನೆ, ನೌಪತ್ ಹಾಗೂ ಪಟ್ಟದ ಆನೆ ಆಯ್ಕೆ ಇನ್ನಷ್ಟೆ ಆಗಬೇಕಿದೆ. ದಸರಾ ಉತ್ಸವದಲ್ಲಿ ಭಾಗವಹಿಸಲು ಕರೆತಂದಿರುವ ಗಜಪಡೆ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು, ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮಾವುತರು, ಕಾವಾಡಿಗರ ಮಕ್ಕಳಿಗೆ ಕೇರಂ, ಬ್ಯಾಸ್ಕೆಟ್ ಬಾಲ್, ಕ್ರಿಕೆಟ್ ಆಡಲು ಬೇಕಾದ ಸಾಮಗ್ರಿಗಳನ್ನು ನೀಡಲಾಗಿದೆ. ಆನೆಗಳೊಂದಿಗೆ ಆಗಮಿಸಿರುವ ಮಾವುತ ಮತ್ತು ಕಾವಾಡಿ ಕುಟುಂಬಗಳ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಟೆಂಟ್ ಶಾಲೆ ಇನ್ನಷ್ಟೆ ಆರಂಭವಾಗಬೇಕಾಗಿದೆ.
ಗಾದಿ ನಮ್ದಾಗೆ ವಿಶೇಷ ಪೂಜೆ
ಭಾರದ ತಾಲೀಮು ಹೊರುವುದಕ್ಕೂ ಮುನ್ನ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಕೋಡಿಸೋಮೇಶ್ವರ ದೇವಸ್ಥಾನದ ಬಳಿ ಆನೆಗಳ ಮೇಲಿಡುವ ಗಾದಿ ಮತ್ತು ನಮ್ದಾಗೆ ಪೂಜೆ ಸಲ್ಲಿಸಿ ತಾಲೀಮಿಗೆ ಚಾಲನೆ ನೀಡಲಾಗುತ್ತದೆ. ಮೊದಲಿಗೆ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಆನೆಗಳ ಬೆನ್ನಿನ ಮೇಲೆ ಇಡುವ ಗಾದಿ, ನಮ್ದಾ ಹಾಗೂ ಆನೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಆನೆಗಳ ಮೇಲೆ ಗಾದಿ, ನಮ್ದಾ ಇಟ್ಟು ತಾಲೀಮು ಆರಂಭಿಸಲಾಗುತ್ತದೆ.

ಅಂಬಾರಿ ಹೊರಲಿರುವ ಅಭಿಮನ್ಯು ಸೇರಿ ಎಲ್ಲ ಆನೆಗಳಿಗೆ ವಿಶೇಷ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಮುಂಜಾನೆ ಎದ್ದು ಮಾವುತರು, ಕಾವಾಡಿಗಳು ಆಲದ ಸೊಪ್ಪು ತಿನ್ನಿಸಿ ನಂತರ ಸ್ನಾನ ಮಾಡಿಸುತ್ತಾರೆ. ಬಳಿಕ, ಬೆಲ್ಲ, ಕಬ್ಬು, ತೆಂಗಿನ ಕಾಯಿ ಜತೆಗೆ ಇನ್ನಿತರ ಕಾಳಿನ ಆಹಾರ ನೀಡಲಾಗುತ್ತದೆ. ಕಾಡಿನಲ್ಲಿ ಇದ್ದಾಗ ಸಾಕಷ್ಟು ಮಟ್ಟಿಗೆ ಹಸಿಸೊಪ್ಪುಗಳನ್ನು ತಿನ್ನುವ ಆನೆಗಳಿಗೆ ಅರಮನೆಯಲ್ಲಿರುವಷ್ಟು ದಿನಗಳ ಕಾಲ ಯಾವುದೇ ಕೊರತೆ ಇಲ್ಲದಂತೆ ವಿಶೇಷ ಖಾದ್ಯಗಳನ್ನು ನೀಡುವುದು ವಿಶೇಷವಾಗಿದೆ.
ಗಜಪಡೆಗೆ ಇನ್ನಷ್ಟು ಕಠಿಣ ತಾಲೀಮು
ಇನ್ನು ಮುಂದೆ ಗಜಪಡೆಗೆ ಪ್ರತಿದಿನವೂ ವಿಶೇಷ ತಾಲೀಮು ನಡೆಯಲಿದ್ದು, ಭಾರಹೊರುವ ತಾಲೀಮಿನ ಜತೆಜತೆಯಲ್ಲಿಯೇ ಶಬ್ದಕ್ಕೆ ಹೆದರದಂತೆ ಅಭ್ಯಾಸ ಮಾಡಲು ಸಿಡಿಮದ್ದಿನ ತಾಲೀಮು ಕೂಡ ನಡೆಯಲಿದೆ. ಒಟ್ಟಾರೆ ದಸರಾ ಜಂಬೂ ಸವಾರಿಗೆ ಗಜಪಡೆಯನ್ನು ಸಜ್ಜುಗೊಳಿಸುವ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ಮತ್ತು ಕಾವಡಿ, ಮಾವುತರು ನಿರತರಾಗಿರುವುದು ಕಂಡು ಬರುತ್ತಿದೆ.












Click it and Unblock the Notifications