ಮೈಸೂರು ದಸರಾ 2023: ಕುಶಾಲತೋಪು ತಾಲೀಮು ಆರಂಭ, ಬೆದರಿದ ಸುಗ್ರೀವ, ಹಿರಣ್ಯ
ಮೈಸೂರು, ಅಕ್ಟೋಬರ್ 11: ನಾಡ ಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಕಣೆ ಜಂಬೂ ಸವಾರಿ. ಈ ಜಂಬೂಸವಾರಿಯಲ್ಲಿ ಸಾಗುವ ಗಜಪಡೆಗಳ ತಾಲೀಮು ದಿನದಿಂದ ದಿನಕ್ಕೆ ಬದಲಾಗುತ್ತಾ ಹೋಗುತ್ತದೆ. ಇದೀಗ ದಸರಾ ಆನೆಗಳಿಗೆ ಸಿಡಿಮದ್ದಿನ ತಾಲೀಮು ಯಶಸ್ವಿಯಾಗಿ ನಡೆದಿದೆ.
ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳಿಗೂ ಈ ತಾಲೀಮು ಮಾಡಿಸಲಾಗುತ್ತದೆ. ಶಬ್ದಗಳಿಗೆ ಆನೆಗಳು ಭಯಪಡದಂತೆ ಸಿಡಿಮದ್ದಿನ ಅಭ್ಯಾಸ ಮಾಡಿಸಲಾಗುತ್ತದೆ

ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ತಾಲೀಮು ನಡೆಯಿತು. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ಮಾಡಲಾಯಿತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ನಡೆಯಿತು. ತಾಲೀಮಿನಲ್ಲಿ 43 ಅಶ್ವಾರೋಹಿ ದಳ ಭಾಗವಹಿಸಿದ್ದವು.
ಜಂಬೂಸವಾರಿಯ ದಿನವಾದ ವಿಜಯದಶಮಿಯಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ನಂತರ 21 ಸುತ್ತಿನ ಕುಶಾಲತೋಪು ಸಿಡಿಸುವಾಗ ಹೊಮ್ಮುವ ಕಿವಿಗಡಚಿಕ್ಕುವ ಶಬ್ದಕ್ಕೆ ಕುದುರೆ, ಆನೆಗಳು ಬೆಚ್ಚದಂತೆ ಮಾಡಲು, ಪೂರ್ವಭ್ಯಾಸ ನೀಡುವುದು ವಾಡಿಕೆ. ಹಾಗಾಗಿ ಪ್ರತಿವರ್ಷ ಇದನ್ನು ಮಾಡಲಾಗುತ್ತದೆ.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಆನೆಗಳು ಕುಶಾಲುತೋಪು ತಾಲೀಮಿನಲ್ಲಿ ಭಾಗಿಯಾಗಿದ್ದವು. ಸುಗ್ರೀವ ಹಾಗೂ ಹಿರಣ್ಯ ಆನೆಗಳು ಬೆದರಿದವು. ಮುನ್ನೆಚ್ಚರಿಕೆಯಾಗಿ ಆನೆ ಎರಡು ಕಾಲುಗಳಿಗೆ ಸರಪಳಿ ಕಟ್ಟಿದ್ದರಿಂದ ಆನೆಗಳು ನಿಂತಲ್ಲೇ ಅಲುಗಾಡಿದವು. ಇನ್ನು ಸಿಡಿಮದ್ದು ತಾಲೀಮಿಗೆ ಅಶ್ವಗಳು ಹೆದರಿದ್ದು ಕಂಡು ಬಂದಿತು. ವಿಜಯದಶಮಿ ದಿನ ರಾಷ್ಟ್ರಗೀತೆ ಕೇಳಿಬರುವ 53 ಸೆಕೆಂಡುಗಳಲ್ಲಿ ಬ್ಯಾರಲ್ ಅನ್ನು 21 ಬಾರಿ ಸ್ವಚ್ಛಗೊಳಿಸಿ, 21 ಬಾರಿ ಕುಶಾಲತೋಪು ಸಿಡಿಸಲಾಗುತ್ತದೆ.

ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು
ಇನ್ನು ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಹೊರುವ ತಾಲೀಮು ನಡೆಯುತ್ತಿದೆ. ಕಳೆದೆರಡು ದಿನಗಳಿಂದ ಆರಂಭಗೊಂಡಿರುವ ಮರದ ಅಂಬಾರಿಯ ತಾಲೀಮು ಜಂಬೂಸವಾರಿಯ ಹಿಂದಿನ ದಿನದವರೆಗೆ ನಡೆಯಲಿದೆ. ಇದೀಗ ಪ್ರತಿದಿನ ಮರದ ಅಂಬಾರಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತಾಲೀಮು ನಡೆಸುತ್ತಿದ್ದು, ಇದನ್ನು ನೈಪುಣ್ಯ ಹೊಂದಿದ ಮಾವುತರು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಲಾಗುತ್ತಿದೆ. ಮೊದಲ ದಿನವಾದ ಸೋಮವಾರ ಸಂಜೆ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿದಂತೆ 750 ಕೆಜಿ ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಿದೆ.
ಸುಮಾರು 280 ಕೆ.ಜಿ ತೂಕದ ಮರದ ಅಂಬಾರಿ, 400 ಕೆ.ಜಿ ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಹೆಚ್ಚಿನ ಭಾರವನ್ನು ಹೊತ್ತು ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ 5 ಕಿ.ಮೀ ದೂರವನ್ನು ಯಶಸ್ವಿಯಾಗಿ ಪೂರೈಸಿದೆ. ಇನ್ನು ಅಭಿಮನ್ಯು ಮರದ ಅಂಬಾರಿ ಹೊತ್ತು ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಪಕ್ಕ ಕುಮ್ಕಿ ಆನೆಗಳಾದ ವರಲಕ್ಷ್ಮಿ, ವಿಜಯ ಸಾಥ್ ನೀಡಿವೆ. ಅಷ್ಟೇ ಅಲ್ಲದೆ ಗಂಡಾನೆಗಳಾದ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ್, ಹೆಣ್ಣಾನೆಗಳಾದ ಲಕ್ಷ್ಮಿ, ಹಿರಣ್ಯಾ ಕೂಡ ಭಾಗವಹಿಸಿ ಗಮನಸೆಳೆದವು. ಮೊದಲ ದಿನ ಮಳೆಯಲ್ಲಿಯೇ ಗಜಪಡೆಯ ತಾಲೀಮು ನಡೆದಿದೆ.











Click it and Unblock the Notifications